ಸಾಧು ಕೋಕಿಲ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ

Update: 2019-12-09 17:54 GMT

ಬೆಂಗಳೂರು, ಡಿ.9: ಮೈಸೂರಿನ ಸಲೂನ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ದೋಷಾರೋಪ ಪಟ್ಟಿಯಿಂದ ನನ್ನ ಹೆಸರು ಕೈಬಿಡಬೇಕೆಂದು ಕೋರಿ ಸಾಧು ಕೋಕಿಲ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಸಾಧು ಕೋಕಿಲ ಪರ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷಾಧಾರ ಇಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅವರ ತೇಜೋವಧೆ ಮಾಡುವ ಯತ್ನವಾಗಿದೆ. ಹೀಗಾಗಿ, ಈ ಕುರಿತಂತೆ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು. ನ್ಯಾಯಪೀಠವು ಪ್ರಕರಣದ ವಿಚಾರಣೆಗೆ ಸೋಮವಾರ ತಡೆ ನೀಡಿದೆ.

ಪ್ರಕರಣವೇನು: ಸರಸ್ವತಿಪುರಂ ಪೊಲೀಸ್ ಠಾಣೆ ಸರಹದ್ದಿನ ಬೋಗಾದಿ ರಿಂಗ್ ರೋಡ್ ಬಳಿಯ ಸ್ವಾಮಿ ಆರ್ಕೆಡ್ ಕಟ್ಟಡದಲ್ಲಿನ ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್‌ನಲ್ಲಿ ಅದರ ಮಾಲಕರು ಹುಡುಗಿಯರನ್ನು ಇಟ್ಟುಕೊಂಡು ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2017ರ ಡಿ.20ರಂದು ಸಲೂನ್ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸಲೂನ್ ಮಾಲಕ ರಾಜೇಶ್ ಹಾಗೂ ಒಬ್ಬ ಮಹಿಳಾ ಸಿಬ್ಬಂದಿ ಇದ್ದರು. ಮಹಿಳಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಆಕೆ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಸಾಧು ಕೋಕಿಲ ವಿರುದ್ಧ ದೂರು ದಾಖಲಿಸಿದ್ದರು.

ಹೇಳಿಕೆಯಲ್ಲಿ ಏನಿದೆ ? ಪಾರ್ಲರ್‌ಗೆ ಬಂದಂತಹ ಪುರುಷರ ಗುಪ್ತ ಅಂಗಗಳಿಗೆ ಮಸಾಜ್ ಮಾಡಲು ನನಗೆ ಹೇಳಿದರು. ಆ ಪಾರ್ಲರ್‌ನಲ್ಲಿ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಅವರ ಗುಪ್ತ ಅಂಗಗಳಿಗೂ ಮಸಾಜ್ ಮಾಡಬೇಕಾಗಿತ್ತು ಎಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News