ಅನರ್ಹರಿಗೆ ಮತದಾರರ ‘ಮಾನ ಪತ್ರ’

Update: 2019-12-10 05:24 GMT

ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕೊನೆಗೂ 11 ಅನರ್ಹ ಶಾಸಕರಿಗೆ ಮತದಾರರ ಮೂಲಕ ‘ಮಾನಪತ್ರ’ ದೊರಕಿದೆ. ಕಾರಣ ನಿಗೂಢವಾಗಿದ್ದರೂ ಇಬ್ಬರನ್ನು ‘ಅನರ್ಹ’ ಪಟ್ಟಿಯಿಂದ ತೆಗೆದು ಹಾಕಲು ಮತದಾರರು ಹಿಂದೇಟು ಹಾಕಿದ್ದಾರೆ. ಈ ಫಲಿತಾಂಶದ ಮೂಲಕ ‘ಅನರ್ಹ’ ಸರಕಾರವೆಂದು ಪರೋಕ್ಷವಾಗಿ ಸುಪ್ರೀಂಕೋರ್ಟ್ ನಿಂದ ಕರೆಸಿಕೊಂಡ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೂ ಅರ್ಹತೆ ಬಂದಂತಾಗಿದೆ. ಉಪಚುನಾವಣೆಯಲ್ಲಿ ‘ಅನರ್ಹ ಶಾಸಕ’ರ ಸಮಯ ಸಾಧಕ ರಾಜಕಾರಣಕ್ಕೆ ಮತದಾರರು ಸರಿಯಾದ ಪಾಠವನ್ನು ಕಲಿಸುತ್ತಾರೆ ಎಂದು ಭಾವಿಸಿದ್ದ ರಾಜಕೀಯ ಚಿಂತಕರ ಸ್ಥಿತಿ ಚಿಂತಾಜನಕವಾಗಿದೆ. ಅವರು ಈ ಫಲಿತಾಂಶವನ್ನು ವಿಮರ್ಶಿಸಲು, ವಿಶ್ಲೇಷಿಸಲು ತಿಣುಕಾಡುತ್ತಿದ್ದಾರೆ. ಕೆಲವರು, ಮತದಾರರನ್ನೇ ‘ಅನರ್ಹ’ರು ಎಂದು ಘೋಷಿಸಿ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುತ್ತಿದ್ದಾರೆ. ಈ ದೇಶದಲ್ಲಿ ‘ಅರ್ಹ’ನೆನ್ನುವ ಕಾರಣಕ್ಕೆ ಅಭ್ಯರ್ಥಿಯೊಬ್ಬ ಚುನಾವಣೆಯಲ್ಲಿ ಗೆದ್ದ ಉದಾಹರಣೆಗಳೇ ಅಪರೂಪ. ಇದ್ದರೂ ಬೆರಳೆಣಿಕೆಯ ಸಂಖ್ಯೆಯಲ್ಲಿ. ಆಗಲೂ ಆತನ ಹಿಂದೆ ಆತನದೇ ಜಾತಿ ಅಥವಾ ವರ್ಗದ ಗುಂಪೊಂದು ಬೆಂಬಲವಾಗಿ ನಿಂತು ಕೆಲಸ ಮಾಡಲೇ ಬೇಕು.

ಈ ಹಿಂದೆ ಶಿವರಾಮ ಕಾರಂತರಂತಹ ಚಿಂತಕರು ಚುನಾವಣೆಗೆ ನಿಂತಾಗ ಅವರು ಹೀನಾಯವಾಗಿ ಸೋತಿದ್ದರು. ಆದುದರಿಂದ ಕಾರಂತರನ್ನು ‘ಅನರ್ಹ’ ಅಭ್ಯರ್ಥಿ ಎಂದು ಇತಿಹಾಸ ಗುರುತಿಸಿಲ್ಲ. ಹಾಗೆಂದು ಕಾರಂತರನ್ನು ಸೋಲಿಸಿದ ಮತದಾರರೆಲ್ಲರನ್ನು ಅನರ್ಹರು ಎಂದು ಘೋಷಿಸಿ ಮತದಾನದಿಂದ ಹೊರಗೂ ಇಟ್ಟಿಲ್ಲ. ಮತದಾರರಲ್ಲಿ ಶಿವರಾಮ ಕಾರಂತರ ಪುಸ್ತಕಗಳನ್ನೋ, ಚಿಂತನೆಗಳನ್ನೋ ಓದಿ ಸುಶಿಕ್ಷಿತ ಮತದಾರರಾದವರೆಷ್ಟಿದ್ದಾರೆ? ಪ್ರಬುದ್ಧ ಮತದಾರರನ್ನು ರೂಪಿಸುವುದೂ ಪ್ರಜಾಪ್ರಭುತ್ವ ದೇಶವೊಂದರ ಹೊಣೆಗಾರಿಕೆಯ ಭಾಗವಾಗಿದೆ. ಈ ದೇಶದಲ್ಲಿ ಶೇಕಡ 75ರಷ್ಟು ಅನಕ್ಷರಸ್ಥರಿದ್ದಾಗ ಅವರು ಕೋಮುವಾದಿಗಳು, ಮತಾಂಧರು ಆಗಿರಲಿಲ್ಲ. ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಗುರುತಿಸುವ ಕಣ್ಣು ಕಿವಿ ಅವರಲ್ಲಿತ್ತು. ಇಂದು ಈ ದೇಶ ಸಂಪೂರ್ಣ ಸಾಕ್ಷರತೆಯೆಡೆಗೆ ಸಾಗಿದೆ. ಆದರೆ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಗುರುತಿಸುವ ಅವರ ಕಣ್ಣು, ಕಿವಿಗಳನ್ನು ಕಿತ್ತುಕೊಳ್ಳಲಾಗಿದೆ. ಸಾಕ್ಷರತೆ ಜನರನ್ನು ಪ್ರಬುದ್ಧರನ್ನಾಗಿಸುತ್ತದೆ ಎನ್ನುವ ವ್ಯಾಖ್ಯಾನ ಹಳಸಲಾಗಿದೆ. ಕೆಲವು ಶಕ್ತಿಗಳು ಮತದಾರರನ್ನು ತಮಗೆ ಪೂರಕವಾಗಿ ರೂಪಿಸುವಲ್ಲಿ ಯಶಸ್ವಿಯಾಗಿವೆ. ಅದು ಪ್ರಜಾಸತ್ತೆಯ ಮೂಲಕವೇ ಪ್ರಜಾವಿರೋಧಿ ಸರಕಾರವೊಂದನ್ನು ಸೃಷ್ಟಿಸುವ ತಾಕತ್ತನ್ನು ತನ್ನದಾಗಿಸಿದೆ. ಮತ್ತು ಪ್ರತಿ ಚುನಾವಣೆಯಲ್ಲೂ ಪ್ರಜಾಸತ್ತೆಗಳಿಗೆ ಈ ಮತದಾರರ ಮೂಲಕ ಸವಾಲುಗಳನ್ನು ಒಡ್ಡುತ್ತಿದೆ. ಇಂತಹ ವಾತಾವರಣದಲ್ಲಿ ಅರ್ಹರೋ, ಅನರ್ಹರೋ ಎನ್ನುವುದನ್ನು ಜನತಾ ನ್ಯಾಯಾಲಯವೇ ನಿರ್ಧರಿಸಲಿ ಎನ್ನುವುದೇ ಅರ್ಥಹೀನ.

ಭಾರತದ ಚುನಾವಣೆ ಈ ಹಿಂದೆಯೂ ಹತ್ತು ಹಲವು ಕ್ರಿಮಿನಲ್‌ಗಳನ್ನು, ಅತ್ಯಾಚಾರಿ ಆರೋಪಿಗಳನ್ನು, ಶಂಕಿತ ಉಗ್ರವಾದಿಗಳನ್ನು ಆಯ್ಕೆ ಮಾಡಿದೆ. ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾಗಿರುವ, ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಎದುರಿಸುತ್ತಿರುವ ಶಂಕಿತ ಭಯೋತ್ಪಾದಕಿಯೊಬ್ಬರನ್ನು ಮತದಾರರು ಇತ್ತೀಚೆಗೆ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗೆಂದು ಆಕೆಯನ್ನು ಅರ್ಹಳೆನ್ನುವುದಕ್ಕೆ ಸಾಧ್ಯವಿಲ್ಲ. ಮತದಾನ ವ್ಯವಸ್ಥೆಯನ್ನು ‘ಅನರ್ಹ ವ್ಯವಸ್ಥೆ’ ಎಂದು ಕಸದ ಬುಟ್ಟಿಗೆ ಚೆಲ್ಲುವುದಕ್ಕೂ ಸಾಧ್ಯವಿಲ್ಲ. ನಾವಿಂದು ವಿವಿಧ ಆಮಿಷಗಳಲ್ಲಿ ಕಳೆದುಹೋಗಿರುವ ಮತದಾರರನ್ನು ಟೀಕಿಸುವ ಮೊದಲು, ಈ ಅನರ್ಹರನ್ನು ಚುನಾವಣೆಗೆ ನಿಲ್ಲಿಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್, ಚುನಾವಣಾ ಆಯೋಗದಂತಹ ಸಂಸ್ಥೆಯನ್ನು ಪ್ರಶ್ನಿಸಬೇಕಾಗಿದೆ. ಅನರ್ಹರು ಹೌದು ಎಂದು ಹೇಳುತ್ತಲೇ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಬಹುದಾದಲ್ಲಿ, ಅನರ್ಹ ಶಾಸಕರು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಅನುಕೂಲವಾಗಲಿ ಎಂದು ಚುನಾವಣೆಯನ್ನೇ ಆಯೋಗ ಮುಂದೂಡಬಹುದಾದಲ್ಲಿ , ಮತದಾರರು ಅನರ್ಹ ಶಾಸಕರನ್ನು ಯಾಕೆ ಆಯ್ಕೆ ಮಾಡಬಾರದು? ಈ ಸಂವಿಧಾನ, ಪ್ರಜಾಸತ್ತೆಯ ಹಿರಿಮೆಯನ್ನು, ಸತ್ವವನ್ನು ಅರಿತ ಸುಪ್ರೀಂಕೋರ್ಟ್, ಚುನಾವಣಾ ಆಯೋಗದಂತಹ ಸಂಸ್ಥೆಗಳೇ ಇಂದು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಿದೆ.

ಇವರೆಲ್ಲರೂ ಈ ದೇಶದ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿದವರು. ಇವರೇ ನಿರ್ದಿಷ್ಟ ರಾಜಕೀಯ ಪಕ್ಷಗಳ ಆಮಿಷಗಳಿಗೆ, ಒತ್ತಡಗಳಿಗೆ ಬಲಿಯಾಗಬಹುದಾದರೆ, ಮತದಾರರು ಬಲಿಯಾಗುವುದರಲ್ಲಿ ಅಚ್ಚರಿಯೇನು? ಇಷ್ಟಕ್ಕೂ ಇಂದು ಈ ದೇಶದ ನ್ಯಾಯವ್ಯವಸ್ಥೆಯಿಂದ ಹಿಡಿದು, ವಿವಿಧ ತನಿಖಾ ಸಂಸ್ಥೆಗಳು, ಸರಕಾರಿ ಇಲಾಖೆಗಳು, ಪೊಲೀಸ್ ಠಾಣೆಗಳು ತನ್ನ ಹೊಣೆಗಾರಿಕೆಗಳನ್ನು ಮರೆತು ಕಾರ್ಯವೆಸಗುತ್ತಿರುವಾಗ, ಮತದಾರರು ಆ ವ್ಯವಸ್ಥೆ ಸೃಷ್ಟಿಸುವ ಪರಿಣಾಮಗಳಿಂದಲೇ ರೂಪುಗೊಳ್ಳುತ್ತಾರೆ ಎನ್ನುವುದನ್ನು ನಾವು ಮರೆತು ಬಿಡಬಾರದು. ಬದ್ಧತೆಯಿಲ್ಲ ಹೊಣೆಗೇಡಿ ಮತದಾರರು ಈ ದೇಶದ ಆಕಸ್ಮಿಕ ಸ್ಥಿತಿಯಲ್ಲ. ಈ ಮತದಾರರನ್ನು ನಿರ್ದಿಷ್ಟ ಜನರು, ಸಂಸ್ಥೆಗಳು, ಸಂಘಟನೆಗಳು ಜೊತೆಗೂಡಿ ಸೃಷ್ಟಿಸಿವೆ. ಅದಕ್ಕಾಗಿ ಅಪಾರ ಹಣ, ಸಮಯವನ್ನು ವ್ಯಯ ಮಾಡಿವೆ. ಈ ದೇಶದ ಜಾತ್ಯತೀತ ಧ್ವನಿಗಳು ಕ್ಷೀಣಿಸುತ್ತಿವೆ ಎಂಬ ಆರೋಪಗಳಿವೆ. ಕ್ಷೀಣಿಸುತ್ತಿವೆ ಎನ್ನುವುದಕ್ಕಿಂತ ಮನುವಾದಿ, ಕೋಮುವಾದಿ ಮನಸ್ಥಿತಿ ಹೆಚ್ಚುತ್ತಿವೆ. ಅದಕ್ಕಾಗಿ ಹಲವು ದಶಕಗಳಿಂದ ಹಲವು ಶಕ್ತಿಗಳು ಬೇರೆ ಬೇರೆ ರೂಪಗಳಲ್ಲಿ ಕೆಲಸ ಮಾಡಿವೆ. ಇನ್ನೂ ಮಾಡುತ್ತಿವೆ. ಅದರ ಭಾಗವೇ ಆಗಿದೆ ಉಪಚುನಾವಣಾ ಫಲಿತಾಂಶ. ಇಂದು ಅನರ್ಹರು ರಾಜಕೀಯದೊಳಗೆ ಮಾತ್ರವಲ್ಲ ಎಲ್ಲ ವಲಯದಲ್ಲೂ ವಿಸ್ತರಿಸಿಕೊಂಡಿದ್ದಾರೆ ಎನ್ನುವುದನ್ನಷ್ಟೇ ಫಲಿತಾಂಶ ಹೇಳುತ್ತದೆ ಮತ್ತು ಈ ಫಲಿತಾಂಶವನ್ನು ಒಪ್ಪಿಕೊಳ್ಳುವುದಕ್ಕಿಂತ ಹೊರತಾದ ಇನ್ನೊಂದು ದಾರಿ ಪ್ರಜಾಸತ್ತೆಯ ಮೇಲೆ ನಂಬಿಕೆಯಿರಿಸಿಕೊಂಡ ನಮ್ಮ ಮುಂದೆ ಇಲ್ಲ.

  ಫಲಿತಾಂಶದಲ್ಲಿ ಕೆಲವು ನೆಮ್ಮದಿಯ ವಿಚಾರಗಳಿವೆ. ಮೊದಲನೆಯದು, ಅಸ್ತಿತ್ವದಲ್ಲಿ ಇರುವ ಸರಕಾರ ಸುಭದ್ರವಾಗಿ ಉಳಿಯುವಂತಾಗಿದೆ. ಯಾಕೆಂದರೆ ಈ ಸರಕಾರ ವಿಸರ್ಜನೆಗೊಂಡು ಮತ್ತೊಮ್ಮೆ ಇನ್ನೊಂದು ಹೊಸ ಮೈತ್ರಿ ಸರಕಾರವನ್ನು ಭರಿಸುವ ಶಕ್ತಿ ಈ ನಾಡಿಗಿಲ್ಲ. ಇನ್ನೊಂದು, ಉಪಚುನಾವಣೆಯ ಫಲಿತಾಂಶ ಸರಕಾರವನ್ನು ದುರ್ಬಲಗೊಳಿಸಿದ್ದೇ ಆದಲ್ಲಿ, ಎಲ್ಲ ಸಿದ್ಧಾಂತಗಳನ್ನು ಗಾಳಿಗೆ ತೂರಿ ಸರಕಾರದ ಜೊತೆಗೆ ಕೈ ಬೆಸೆಯುವುದಕ್ಕೆ ಜೆಡಿಎಸ್ ಸಿದ್ಧವಾಗಿ ನಿಂತಿತ್ತು. ಅಂತಹದೇನಾದರೂ ನಡೆದಿದ್ದರೆ, ಅದು ಅನರ್ಹ ಶಾಸಕರು ಎಸಗಿದ ಕೃತ್ಯಕ್ಕಿಂತ ಹೊರತಾದುದಲ್ಲ. ಇಂತಹ ಸಮಯ ಸಾಧಕ ಸರಕಾರಕ್ಕಿಂತ ಮತದಾರರ ಪೂರ್ಣ ಬೆಂಬಲದಿಂದ ಸರಕಾರ ಮುಂದುವರಿಯುವುದೇ ಉತ್ತಮ. ಇದೇ ಸಂದರ್ಭದಲ್ಲಿ ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಸೋತಿದ್ದಾರೆ. ಉಳಿದೆಲ್ಲ ಶಾಸಕರಿಗೆ ಹೋಲಿಸಿದರೆ ವಿಶ್ವನಾಥ್ ವ್ಯಕ್ತಿತ್ವ ಭಿನ್ನವಾದುದು. ಅವರ ರಾಜಕೀಯ ರೂಪುಗೊಂಡದ್ದು ಜಾತ್ಯತೀತ ವೌಲ್ಯಗಳ ತಳಹದಿಯಲ್ಲಿ. ಜೊತೆಗೆ ಅಹಿಂದ ಹೋರಾಟಗಳ ಮೂಲಕ. ಆದರೆ ಎಲ್ಲ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅವರು ಬಿಜೆಪಿಯ ಸೆರಗು ಹಿಡಿಯಲು ಹೊರಟರು. ಸಿದ್ಧಾಂತದ ಹೆಸರು ಹೇಳುತ್ತಾ ರಾಜಕೀಯವಾಗಿ ಬೆಳೆದು, ಬಳಿಕ ಅದಕ್ಕೆ ದ್ರೋಹ ಬಗೆಯುವವರಿಗಿಂತ ಯಾವುದೇ ಸಿದ್ಧಾಂತಗಳಿಲ್ಲದ ಹಣ, ಹೆಂಡಗಳ ಮೂಲಕ ರಾಜಕೀಯ ನಡೆಸುವವರೇ ವಾಸಿ ಎಂದು ಮತದಾರರು ಯೋಚಿಸಿರಬೇಕು. ಈ ನಿಟ್ಟಿನಲ್ಲಿ ಎಚ್. ವಿಶ್ವನಾಥ್ ಅವರನ್ನು ಮತದಾರರು ಕಸದ ಬುಟ್ಟಿಗಿಳಿಸಿದ್ದಾರೆ. ಮತ್ತೋರ್ವ, ಶರತ್ ಬಚ್ಚೇಗೌಡ. ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದನ್ನು ವಿರೋಧಿಸಿ ಬಂಡಾಯವೆದ್ದು ‘ಸ್ವಾಭೀಮಾನ’ವನ್ನು ಅಡವಿಟ್ಟು ಸ್ಪರ್ಧಿಸಿ ಗೆದ್ದಿದ್ದಾರೆ. ಮುಂದೆ ಅವರು ಬಿಜೆಪಿ ಸೇರಿ ಸಚಿವರಾಗಬಹುದು. ಆದರೆ, ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಸಮಯಸಾಧಕ ಮೈತ್ರಿ ಮಾಡಿದ ಜಾತ್ಯತೀತ ಶಾಸಕರಿಗಿಂತ ಬಚ್ಚೇಗೌಡ ಒಂದು ಹೆಜ್ಜೆ ಮುಂದಿದ್ದಾರೆ. ಉಳಿದಂತೆ, ವರ್ತಮಾನದ ರಾಜಕೀಯ ಹೇಗಿರಬೇಕೋ ಅದಕ್ಕೆ ಪೂರಕವಾಗಿಯೇ ಫಲಿತಾಂಶ ಹೊರಬಿದ್ದಿದೆ. ಅನಿರೀಕ್ಷಿತವಾದದ್ದೇನೂ ಸಂಭವಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News