ಪೌರತ್ವ ಮಸೂದೆ ಭಾರತದ ಬುನಾದಿ ನಾಶಪಡಿಸುತ್ತದೆ: ರಾಹುಲ್ ಗಾಂಧಿ

Update: 2019-12-19 07:52 GMT

ಹೊಸದಿಲ್ಲಿ, ಡಿ.10: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪೌರತ್ವ(ತಿದ್ದುಪಡಿ)ಮಸೂದೆಯನ್ನು ಇಂದು ಟೀಕಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಇದು ಭಾರತದ ಬುನಾದಿಯನ್ನೇ ನಾಶಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಹೊಸ ಮೈತ್ರಿ ಪಕ್ಷ ಶಿವಸೇನೆ ಮಸೂದೆಗೆ ಬೆಂಬಲ ನೀಡಿದ ಮರುದಿನವೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಮಸೂದೆಗೆ ಬೆಂಬಲ ನೀಡುವುದಾಗಿ ಶಿವಸೇನೆ ಹೇಳಿಕೊಂಡಿತ್ತು.

ಪೌರತ್ವ ಮಸೂದೆ ಭಾರತೀಯ ಸಂವಿಧಾನದ ಮೇಲಿನ ದಾಳಿಯಾಗಿದೆ. ಯಾರಾದರೂ ಇದನ್ನು ಬೆಂಬಲಿಸಿದರೆ ಅದು ನಮ್ಮ ದೇಶದ ಬುನಾದಿಯನ್ನು ನಾಶಪಡಿಸಲು ಯತ್ನಿಸಿದಂತಾಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

60 ದಶಕಗಳ ಹಳೆಯ ಮಸೂದೆಯನ್ನು ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಮುಸ್ಲಿಮೇತರರು ಭಾರತದ ನಾಗರಿಕರಾಗಲು ದಾರಿಕೊಡಲು ಈ ಹೆಜ್ಜೆ ಇಟ್ಟಿದೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ನಾಳೆ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News