ಎಪಿಪಿ ನೇಮಕದಲ್ಲಿ ಅಕ್ರಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-12-10 18:40 GMT

ಬೆಂಗಳೂರು, ಡಿ.10: ಸಹಾಯಕ ಸರಕಾರಿ ಅಭಿಯೋಜಕರ(ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್-ಎಪಿಪಿ) ನೇಮಕದಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಮತ್ತು ಸುಧಾ ಕಟ್ಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಎಪಿಪಿಗಳ ನೇಮಕದಲ್ಲಿ 61 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಹೀಗಾಗಿ, ಅವರನ್ನು ಸೇವೆಯಲ್ಲಿ ಮುಂದುವರಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಡಿ.ಉಮಾಪತಿ ಅವರು, ಎಪಿಪಿ ನೇಮಕ ಅಕ್ರಮದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 2018ರಲ್ಲಿ 61 ಅಭ್ಯರ್ಥಿಗಳು ಹಾಗೂ ಅಭಿಯೋಜನಾ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದೆ. ಆದರೆ ಆನಂತರ ಆ ಪ್ರಕರಣದ ವಿಚಾರಣೆ ಮುಕ್ತಾಯವಾಗಿ ಯಾರಿಗೂ ಶಿಕ್ಷೆ ಆಗಿಲ್ಲ, ಸರಕಾರವೂ ಕಳಂಕಿತ ಎಪಿಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅಭಿಯೋಜನಾ ಇಲಾಖೆ 2012ರಲ್ಲಿ 197 ಎಪಿಪಿಗಳ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿ 2013ರಲ್ಲಿ ಪ್ರಿಲಿಮಿನರಿ ಹಾಗೂ 2014ರಲ್ಲಿ ಮುಖ್ಯಪರೀಕ್ಷೆ ನಡೆದಿತ್ತು. 197 ಮಂದಿಯನ್ನು ನೇಮಕ ಮಾಡಿ ಅವರಿಗೆ ನೇಮಕ ಪತ್ರಗಳನ್ನೂ ಸಹ ನೀಡಲಾಗಿತ್ತು. ಆನಂತರ 2014ರಲ್ಲಿ ಉತ್ತರ ಪತ್ರಿಕೆಗಳ ಗೋಲ್‌ಮಾಲ್ ವಿಚಾರ ಹೊರಬಂದಿತ್ತು. ಆಗ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಸಮಗ್ರ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2018ರ ಮಾ.15ರಂದು ಅಧೀನ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News