ರಾಜ್ಯದ ಶಿಕ್ಷಣ ಪದ್ಧತಿಯ ಪುನಾರಚನೆ: ಡಿಸಿಎಂ ಅಶ್ವಥ್ ನಾರಾಯಣ

Update: 2019-12-11 18:05 GMT

ಬೆಂಗಳೂರು, ಡಿ.11: ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಶಿಕ್ಷಣ ಪದ್ದತಿಯನ್ನು ಪುನಾರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಬುಧವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ನೂರು ದಿನಗಳ ಸಾಧನೆಗಳು ಹಾಗೂ ಭವಿಷ್ಯದ ಗುರಿ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗುಣಮಟ್ಟದ ಕಲಿಕೆ ಹಾಗೂ ಸಂಶೋಧನೆಯ ಖಾತ್ರಿಗಾಗಿ ಎಲ್ಲ ಪದವಿ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಕಡ್ಡಾಯಗೊಳಿಸಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಪನ್ಯಾಸಗಳ ವೀಡಿಯೋಗಳು ಹಾಗೂ ಪಠ್ಯಕ್ರಮಗಳಿಗೆ ಪ್ರತ್ಯೇಕ ಡಿಜಿಟಲ್ ವೇದಿಕೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆಗಾಗಿ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಜ್ಯ ಆಯೋಗ ಸ್ಥಾಪಿಸಲಾಗುವುದು. ಪದವೀಧರರ ಕೌಶಲ್ಯದ ಗುಣಮಟ್ಟ ಮತ್ತು ಉದ್ಯಮದ ನಿರೀಕ್ಷೆ ಪರಸ್ಪರ ತಾಳೆ ಆಗುತ್ತಿಲ್ಲ ಎಂಬ ಅಂಶ ಗಮನದಲ್ಲಿಟ್ಟುಕೊಂಡು ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮ ಆರಂಭಿಸುವ ಬಗ್ಗೆ ಬೆಂಗಳೂರಿನ ಟೆಕ್ ಸಮಿಟ್‌ನಲ್ಲಿ ಘೋಷಿಸಲಾಗಿದೆ. ಮುಂದಿನ ವರ್ಷದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ವೇತನ ನಿಯಮ ಸೇರಿ, ಈಗಿರುವ ಕಾನೂನಿನಲ್ಲೆ ಬದಲಾವಣೆ ತರುವ ಮೂಲಕ ತಾಂತ್ರಿಕ ಉದ್ಯಮದಲ್ಲಿ ಕೌಶಲ್ಯ ಕಲಿಕೆಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುವುದು. ನ್ಯೂ ಏಜ್ ಇನ್ಕ್ಯೂಬೇಷನ್ ನೆಟ್‌ವರ್ಕ್(ಎನ್‌ಎಐಎನ್) ಸೇರಿ ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆಗೆ ಏಕೀಕೃತ ವ್ಯವಸ್ಥೆ ರೂಪಿಸಲಾಗುವುದು. ಇದರಲ್ಲೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಆನ್‌ಲೈನ್ ವೇದಿಕೆಯೂ ಇರಲಿದೆ. ವಿಶ್ವವಿದ್ಯಾಲಯಗಳಲ್ಲಿ ಫಿಟ್ ಇಂಡಿಯಾ ಯೋಜನೆಯಡಿ ರಾಜ್ಯದ ಜಾನಪದ ಕ್ರೀಡೆಗಳಾದ ಕಬಡ್ಡಿ, ಮಲ್ಲಕಂಬ, ಕುಸ್ತಿ ಮುಂತಾದವುಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿಯ ಒಟ್ಟು ಅನುಪಾತ ತೀರಾ ಕಡಿಮೆ. ಅದೇ ರೀತಿ, ನಮ್ಮ ಪಠ್ಯಕ್ರಮ ಹಾಗೂ ಉದ್ಯಮದ ನಿರೀಕ್ಷೆ ಪರಸ್ಪರ ಪೂರಕವಾಗಿಲ್ಲ ಎಂಬ ಅಂಶ ಗಮನದಲ್ಲಿದೆ. ಈ ಅಸಮತೋಲನವನ್ನು ಸರಿಪಡಿಸಲು, ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕಾರ್ಯಕಾರಿ ಸಮಿತಿಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯನ್ನು ರಾಮನಗರದಲ್ಲಿ 178 ಎಕರೆಯ ಕ್ಯಾಂಪಸ್‌ಗೆ ಸ್ಥಳಾಂತರಿಸಿ ಒಂದು ‘ಆರೋಗ್ಯ ನಗರ’ ನಿರ್ಮಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್ ವಿಶ್ವವಿದ್ಯಾಲಯ ಜೊತೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಒಂದು ಒಪ್ಪಂದಕ್ಕೆ ಈಗಾಗಲೇ ಸಹಿ ಮಾಡಿದೆ ಎಂದು ಅವರು ಹೇಳಿದರು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ಭವಿಷ್ಯದ ಸ್ಮಾರ್ಟ್ ನಗರಗಳು, ಆರೋಗ್ಯ ಕ್ಷೇತ್ರಗಳ ಮೇಲೆ ಈ ಕೇಂದ್ರ ಗಮನವಿರಿಸಲಿದೆ. ಆರೋಗ್ಯ ಕೇಂದ್ರಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ಇ-ಕಚೇರಿಗಳ ಬಳಕೆ ಮೂಲಕ ಇ-ಆಸ್ಪತ್ರೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜತೆ ಸಂಪರ್ಕ ಬೆಸೆಯಲಾಗುವುದು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ವಿದ್ಯಾರ್ಥಿಗಳಿಗೆ ತರಬೇತಿಗಾಗಿ ನರ್ಸಿಂಗ್ ಹಾಗೂ ಅಲೈಡ್ ಆರೋಗ್ಯ ವಿಜ್ಞಾನಗಳ ಸಂಸ್ಥೆಗಳ ಸ್ಥಾಪನೆಯ ಸಾಧ್ಯತೆಗಳ ಕುರಿತು ಸರಕಾರ ಅಧ್ಯಯನ ನಡೆಸಲಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಅಥವಾ ಖಾಸಗಿ ಆಸ್ಪತ್ರೆ ಸೇವೆ ಲಭ್ಯವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಮೆಡಿಕಲ್ ಕಾಲೇಜುಗಳ ಎಲ್ಲ ಆಸ್ಪತ್ರೆಗಳಿಗೆ ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆಯುವ ಜತೆಗೆ ರಾಜ್ಯದಲ್ಲಿರುವ ಎಲ್ಲ ಮೆಡಿಕಲ್ ಕಾಲೇಜುಗಳ ಪ್ರಯೋಗಾಲಯಗಳಿಗೂ ಎನ್‌ಎಬಿಎಲ್ ಮಾನ್ಯತೆ ದೊರೆಯಲಿದೆ ಎಂದು ಅಶ್ವಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News