ನಿರ್ಭಯಾ ಅತ್ಯಾಚಾರ ಪ್ರಕರಣ: ಆರೋಪಿಗಳನ್ನು ಗಲ್ಲಿಗೇರಿಸಲು ಸಿದ್ಧತೆ

Update: 2019-12-12 03:59 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 2012ರ ಡಿಸೆಂಬರ್ 16ರಂದು ರಾತ್ರಿ ಫಿಜಿಯೋಥೆರಪಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ನೇಣುಗಂಬಕ್ಕೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಗಲ್ಲು ಹಗ್ಗಕ್ಕಾಗಿ ಬಿಹಾರ ಕೇಂದ್ರ ಜೈಲನ್ನು ಸಂಪರ್ಕಿಸಲಾಗಿದೆ. ಗಲ್ಲಿಗೇರಿಸುವವರನ್ನು ನಿಯೋಜಿಸಲು ಕೋರಿ ಇತರ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಮರಣದಂಡನೆ ಜಾರಿಗೊಳಿಸಲು ಅಗತ್ಯ ಸಾಧನ ಸಲಕರಣೆಗಳ ಮತ್ತು ಗಲ್ಲಿಗೇರಿಸುವ ಸ್ಥಳದ ಪರಿಶೀಲನೆ ಪೂರ್ಣಗೊಂಡಿದೆ ಎಂದು ಉನ್ನತ ಮೂಲಗಳು ಹೇಳಿವೆ.

"ಬಕ್ಸರ್ ಜೈಲಿನಿಂದ 10 ಹಗ್ಗಗಳನ್ನು ಕಳುಹಿಸಲು ಆದೇಶಿಸಲಾಗಿದೆ. ಸಿದ್ಧತೆಗಳು ನಡೆದಿವೆ. ಬಕ್ಸರ್ ಜೈಲಿನಲ್ಲಿ ಕೈದಿಗಳು ಹಗ್ಗಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದು ವಿಶೇಷ ಹಗ್ಗವಾಗಿದ್ದು, ಗಲ್ಲಿಗೇರಿಸುವಾಗ ಅಥವಾ ಕುತ್ತಿಗೆ ಕತ್ತರಿಸುವರೆಗೂ ಇವು ತುಂಡಾಗುವುದಿಲ್ಲ. ನಮ್ಮಲ್ಲಿ ಹಳೆಯ ಹಗ್ಗ ಇದ್ದು, ಅದನ್ನು ಬಳಸುತ್ತಿಲ್ಲ" ಎಂದು ತಿಹಾರ್ ಜೈಲಿನ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

23 ವರ್ಷದ ಯುವತಿಯ ಮೇಲೆ ಬಸ್ಸಿನಲ್ಲಿ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಸಾಯಿಸಿದ ಘಟನೆಗೆ ಸಂಬಂಧಿಸಿದಂತೆ ಪವನ್ ಗುಪ್ತಾ, ಅಕ್ಷಯ್ ಠಾಕೂರ್, ವಿನಯ್ ಶರ್ಮಾ ಮತ್ತು ಮುಕೇಶ್ ಸಿಂಗ್‍ಗೆ ಮರಣ ದಂಡನೆ ವಿಧಿಸಲಾಗಿದೆ. ಐದನೇ ಶಂಕಿತ ಆರೋಪಿ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರನೇ ಆರೋಪಿ ಕೃತ್ಯ ನಡೆದ ವೇಳೆ ಅಪ್ರಾಪ್ತ ವಯಸ್ಸಿನವನಾಗಿದ್ದ. ಆದರೆ ಯಾವಾಗ ಗಲ್ಲುಶಿಕ್ಷೆ ಜಾರಿಗೊಳಿಸಲಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಬಿಟ್ಟುಕೊಟ್ಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News