ಪೌರತ್ವ ಮಸೂದೆಗೆ ವಿರೋಧ: ಕೇಂದ್ರ ಸಚಿವ ರಾಮೇಶ್ವರ್ ಮನೆ ಮೇಲೆ ದಾಳಿ

Update: 2019-12-19 05:47 GMT

ಗುವಾಹಟಿ, ಡಿ.13: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ನಡೆಸುತ್ತಿರುವ  ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರತಿಭಟನಾನಿರತರು ಬುಧವಾರ ರಾತ್ರಿ ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಬ್ರುಗಢ ಜಿಲ್ಲೆಯ ಡುಲಿಯಜನ್‌ನಲ್ಲಿ ಸಚಿವರ ಮನೆಯ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು ಸಚಿವರ ಮನೆಯ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಕೇಂದ್ರ ಸರಕಾರದಲ್ಲಿ ರಾಜ್ಯ ಆಹಾರ ಸಂಸ್ಕರಣ ಕೈಗಾರಿಕೆಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರಾಮೇಶ್ವರ್ ಲೋಕಸಭೆಯಲ್ಲಿ ದಿಬ್ರುಗಢವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಮೊದಲು ದಿಬ್ರುಗಢದಲ್ಲಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮನೆಯ ಮೇಲೆಯೂ ಪ್ರತಿಭಟನಾನಿರತರು ಕಲ್ಲುತೂರಾಟ ನಡೆಸಿದ್ದರು. ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವವರು ಜಿಲ್ಲೆಯ ಬಿಜೆಪಿ ಶಾಸಕ ಪ್ರಶಾಂತ ಫುಕಾನ್ ಹಾಗೂ ಪಕ್ಷದ ನಾಯಕ ಸುಭಾಶ್ ದತ್ತ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂನ ಗುವಾಹಟಿ, ಟಿನ್‌ಸುಕಿಯಾ,ದಿಬ್ರುಗಢ ಹಾಗೂ ಜೊಹ್ರಾಟ್ ಜಿಲ್ಲೆಗಳಲ್ಲಿ ಸೇನೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News