ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಮಾಡಿಲ್ಲ: ಡಿ.ಕೆ.ಶಿವಕುಮಾರ್

Update: 2019-12-12 10:07 GMT

ಬೆಂಗಳೂರು: ಪಕ್ಷದಲ್ಲಿ ಗುಂಪುಗಾರಿಕೆ ಮಾಡಿ, ಸ್ಥಾನಕ್ಕಾಗಿ ಲಾಬಿ ಮಾಡುವ ಯಾವ ಅಗತ್ಯವೂ ನನಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ ನಂತರ ಈ ಸ್ಥಾನಕ್ಕೆ ಡಿಕೆ ಶಿವಕುಮಾರ್ ಲಾಬಿ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದ್ದು, ಈ ವಿಚಾರವಾಗಿ ಗುರುವಾರ ಮಾಧ್ಯಮಗಳ ಜತೆ ಮಾತನಾಡುವಾಗ ಸ್ಪಷ್ಟಪಡಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು..

‘ಪಕ್ಷದಲ್ಲಿ ನಾನು ಗುಂಪುಗಾರಿಕೆ ಮಾಡುವವನಲ್ಲ. ಜಾತಿ ಮೇಲೆ ಧರ್ಮದ ಮೇಲೆ ಗುಂಪು ಕಟ್ಟಿಲ್ಲ. ಅದರ ಅಗತ್ಯ ಇದ್ದಿದ್ದರೆ ನಾನು ಎಸ್.ಎಮ್ ಕೃಷ್ಣ ಅವರ ಅಧಿಕಾರ ಮುಗಿದ ವೇಳೆ ಗುಂಪು ಕಟ್ಟಿ ರಾಜಕೀಯ ಮಾಡಬಹುದಿತ್ತು. ಆದರೆ ಆ ಕೆಲಸ ನಾನು ಮಾಡಿದವನಲ್ಲ. ಮಾಧ್ಯಮಗಳಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡುತ್ತಿರುವುದಾಗಿ ವರದಿ ಬರುತ್ತಿವೆ. ನನ್ನನ್ನು ನನ್ನ ಕ್ಷೇತ್ರದ ಜನ ಮತ್ತು ಪಕ್ಷ ಬೆಳೆಸಿದೆ. ನನ್ನ ಜನರು ಕೊಟ್ಟಿರುವ ಸ್ಥಾನಮಾನವೇ ನನಗೆ ಸಾಕು. ಈ ಸಂದರ್ಭದಲ್ಲಿ ನಾನು ಯಾವುದೇ ಲಾಬಿ ಮಾಡಿಲ್ಲ ಎಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಸದ್ಯ ಮಾಧ್ಯಮಗಳು ನನ್ನ ಫ್ರೀ ಆಗಿ ಬಿಟ್ಟರೆ ಸಾಕು. ಗುಂಪುಗಾರಿಕೆ ವಿಚಾರವಾಗಿ ಬೇರೆ ನಾಯಕರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ನನ್ನನ್ನು ಕೇಳಬೇಡಿ. ನನಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಯಾವ ನಾಯಕರು ಏನು ಹೇಳಿದರು ಎಂಬುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆ ವಿಚಾರಗಳ ಬಗ್ಗೆ ಅವರನ್ನೇ ಕೇಳಬೇಕು. ಅವರ ವಾಕ್ ಸ್ವಾತಂತ್ರ್ಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ ಫಲಿತಾಂಶದಿಂದ ಬೇಸರವಾಗಿ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರೀತಿ. ಹೈಕಮಾಂಡ್ ಅವರ ರಾಜೀನಾಮೆ ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ಶಾಸಕಾಂಗ ಪಕ್ಷದ ನಾಯಕತ್ವದ ಸ್ಥಾನವಾಗಲಿ ಖಾಲಿ ಇಲ್ಲ. ಅವರೂ ಕೂಡ ಮನುಷ್ಯರು. ಮತದಾರರು ತಮ್ಮ ಕೈ ಹಿಡಿಯಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆ ಸ್ವಾತಂತ್ರ್ಯವೂ ಅವರಿಗಿಲ್ಲವೇ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಗೆಲುವು ಸೋಲುಗಳು ಸರ್ವೇ ಸಾಮಾನ್ಯ. ಇಂತಹ ಸೋಲುಗಳಿಂದ ಧೃತಿಗೆಡಬಾರದು. ಇಂತಹ ಫಲಿತಾಂಶಗಳನ್ನು ನೋಡಿದ್ದೇವೆ. ಪ್ರಚಾರದ ವೇಳೆ ಸಾವಿರಾರು ಜನ ಸೇರಿದ್ದರು. ಆಗಲೂ ನಮಗೆ ಗೊತ್ತಿತ್ತು. ಪ್ರಚಾರದ ವೇಳೆ ಬರುವ ಜನರೆಲ್ಲ ಮತವಾಗಿ ಬದಲಾಗುವುದಿಲ್ಲ. ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಎಷ್ಟು ಜನ ಸೇರಿದ್ದರು ಎಂಬುದು ನನಗೆ ಗೊತ್ತಿದೆ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಪುತ್ರ ನಾಮಪತ್ರ ಸಲ್ಲಿಕೆ ವೇಳೆ ಹೋಗಿದ್ದೆ. ನಾನು ಅದುವರೆಗೂ ನಾಮಪತ್ರಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದನ್ನು ನೋಡಿರಲಿಲ್ಲ. ಆದರೆ ಅವು ಮತವಾಗಿ ಬದಲಾಗಲಿಲ್ಲ. ನನಗೆ ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸ ಮುಖ್ಯ. ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳಬಾರದು. ಪಕ್ಷದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಯಾರ ಬಗ್ಗೆಯೂ ಹಗೆ ಮಾಡಬಾರದು, ದ್ವೇಷ ಮಾಡಬಾರದು.

ಭಾರತ್ ಬಚಾವ್ ಆಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದು ಪಕ್ಷದ ನಾಯಕರು ನಮ್ಮ ಎಲ್ಲ ಶಾಸಕರು, ನಾಯಕರಿಗೆ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ನಾನು ದೆಹಲಿಗೆ ತೆರಳುತ್ತಿದ್ದೇನೆ. ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ತಿದ್ದುಪಡಿ, ದೇಶಕ್ಕೆ ಮಾರಕ. ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಎಲ್ಲ ಪಕ್ಷ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ಅದನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ದೇಶದೆಲ್ಲೆಡೆ ಪ್ರತಿಭಟನೆಗಳು ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News