ಪೌರತ್ವ ಮಸೂದೆಯಿಂದ ಮುಸ್ಲಿಮರ ಜೊತೆ ಎಲ್ಲ ಧರ್ಮದವರಿಗೂ ಸಂಕಷ್ಟ: ಪ್ರೊ.ರವಿವರ್ಮ ಕುಮಾರ್ ಎಚ್ಚರಿಕೆ

Update: 2019-12-19 05:36 GMT

ಬೆಂಗಳೂರು, ಡಿ.10: ಕೇಂದ್ರ ಸರಕಾರ ಜನರ ಮೇಲೆ ಹೇರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನ ವಿರುದ್ಧವಾಗಿದ್ದು, ಇದರ ವಿರುದ್ಧ ಪ್ರತಿಭಟಿಸದಿದ್ದಲ್ಲಿ, ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ಗುರುವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ವತಿಯಿಂದ ಆಯೋಜಿಸಿದ್ದ 2019 ರ ಆರ್ಥಿಕ ಬಿಕ್ಕಟ್ಟು ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಕೇವಲ ಮುಸ್ಲಿಮರಷ್ಟೇ ಅಲ್ಲ ಎಲ್ಲ ಧರ್ಮದವರೂ ಸಂಕಷ್ಟದ ಸ್ಥಿತಿ ಎದುರಿಸಬೇಕಾಗಿದೆ. ಇದರ ವಿರುದ್ಧ ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ, ಹಿಟ್ಲರ್‌ನ ಸೆರೆವಾಸದಿಂದ ಬಿಡುಗಡೆಗೊಂಡ ಮಾರ್ಟಿನ್ ನಿಮೋಲ್ಲರ್‌ಗಾದ ಗತಿಯೇ ನಮಗಾಗಲಿದೆ ಎಂದು ಅವರು ಎಚ್ಚರಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಕ್ರೈಸ್ತರು, ಬೌದ್ಧರು, ಪಾರ್ಸಿ, ಜೈನರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಇಲ್ಲಿ ದೌರ್ಜನ್ಯಕ್ಕೊಳಗಾಗುವ ಮುಸ್ಲಿಮರನ್ನು ಹೊರಗಿಡಲಾಗಿದೆ. ಧರ್ಮದ ಆಧಾರದಲ್ಲಿ ರೂಪಿತವಾಗಿರುವ ಈ ಮಸೂದೆಯು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದ್ದು, ಇದು ದೇಶವಿಭಜನೆಗೆ ಕಾರಣವಾಗಲಿದೆ ಎಂದರು.

ಹಿಟ್ಲರ್ ಯಹೂದಿಗಳನ್ನು ಬಂಧಿಸಲು ಇದೇ ರೀತಿಯಲ್ಲಿಯೇ ಕೆಲಸ ಮಾಡಿದ್ದ. ಯಹೂದಿಗಳನ್ನು ಬಂಧಿಸಿಡಲು ಪ್ರತ್ಯೇಕ ಜೈಲುಗಳನ್ನು ಸ್ಥಾಪಿಸಿದ್ದರು. ಅದೇ ಮಾದರಿಯ ಜೈಲುಗಳನ್ನು ಇದೀಗ ಬೆಂಗಳೂರಿನ ಹೊರ ವಲಯದಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಮೊದಲು ಅಕ್ರಮ ವಲಸಿಗರನ್ನು, ಬಳಿಕ ಇತರೆ ಧರ್ಮದವರನ್ನು ಹಾಗೂ ಇತರೆ ಜಾತಿಯವರನ್ನು ಗುರಿ ಮಾಡಲಾಗುತ್ತದೆ ಎಂದು ನುಡಿದರು.

ಹಿಟ್ಲರ್ ನಿರ್ಮಿಸಿದ್ದ ಜೈಲಿನಲ್ಲಿ 60 ಲಕ್ಷ ಜನರನ್ನು ಹತ್ಯೆ ಮಾಡಲಾಗಿತ್ತು. ಹಿಟ್ಲರ್‌ನ ಸಾವಿನ ಬಳಿಕ ಜೈಲಿನಲ್ಲಿ ಉಳಿದವರನ್ನು ಬಿಡುಗಡೆ ಮಾಡಲಾಯಿತು. ಹೀಗೇ ಕೊನೆಯ ತಂಡದಲ್ಲಿ ಬಿಡುಗಡೆಗೊಂಡ ಮಾರ್ಟಿನ್ ನಿಮೋಲ್ಲರ್‌ನನ್ನು ಅಮೆರಿಕದ ಸಂಸತ್ ಗೌರವಿಸಿತು. ಈ ವೇಳೆ ಮಾತನಾಡಿದ ಆತ, ಅವರು ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ, ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು, ನಾನು ಕಮ್ಯುನಿಸ್ಟನಾಗಿರಲಿಲ್ಲ. ಹೀಗಾಗಿ, ತಟಸ್ಥನಾಗಿದ್ದೆ, ಮತ್ತೆ ಅವರು ಕೆಥೋಲಿಕ್‌ಗಳನ್ನು ಬಂಧಿಸಿ ಜೈಲಿಗಟ್ಟಿದರು, ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ, ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ... ಎಂದಿದ್ದ. ಹೀಗಾಗಿ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕಿದೆ ಎಂದರು.

ದೇಶದಲ್ಲಿ ಕೈಗಾರಿಕೆಗಳು ಮತ್ತು ಶಾಲೆಗಳಿಗಿಂತ ವೇಗವಾಗಿ ಪೂಜಾಸ್ಥಳಗಳ ನಿರ್ಮಾಣವಾಗುತ್ತಿವೆ. ಸರಕಾರಿ ಸ್ಥಳವನ್ನು ಆಕ್ರಮಿಸಿಕೊಂಡು ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದ ಅವರು, 2011 ರಂತೆ ದೇಶದಲ್ಲಿ 33 ಕೋಟಿ ದೇವಸ್ಥಾನಗಳಿವೆ. ಇದೀಗ ಪೈಪೋಟಿಗೆ ಬಿದ್ದು, ಮಸೀದಿ, ಚರ್ಚ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಹೈದರಾಬಾದ್‌ನಲ್ಲಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿದ ಅವರು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ನ್ಯಾಯಾಂಗ ಮತ್ತು ನ್ಯಾಯಾಧೀಶರ ಕೆಲಸವನ್ನು ಪೊಲೀಸರು ಕೈಗೆತ್ತಿಕೊಳ್ಳುವುದು ಆತಂಕಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಡಿವೈಒ ಅಖಿಲ ಭಾರತ ಸಮಿತಿ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದ ಜಿಡಿಪಿ ದರ ದಿನೇ ದಿನೇ ಕುಸಿಯುತ್ತಿದ್ದು, ಯಾವುದೇ ವಲಯಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದರ ಬಗ್ಗೆ ಗಮನಹರಿಸಬೇಕಾದ ಸರಕಾರ ಜನರ ಮನಸ್ಸನ್ನು ಬೇರೆಡೆ ತಿರುಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಅಂಕಣಕಾರ ಕೆ.ಸಿ.ರಘು, ಶಶಿಕುಮಾರ್, ಎಐಡಿವೈಒ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ಕಾರ್ಯದರ್ಶಿ ಡಾ.ಜಿ.ಎಸ್.ಕುಮಾರ್ ಸೇರಿದಂತೆ ಹಲವರಿದ್ದರು.

"ಅವರು ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ. ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು, ನಾನು ಕಮ್ಯುನಿಸ್ಟನಾಗಿರಲಿಲ್ಲ, ಹೀಗಾಗಿ, ತಟಸ್ಥನಾಗಿದ್ದೆ. ಮತ್ತೆ ಅವರು ಕೆಥೋಲಿಕ್‌ಗಳನ್ನು ಬಂಧಿಸಿ ಜೈಲಿಗಟ್ಟಿದರು, ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ, ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ" 

ಹಿಟ್ಲರ್‌ನ ಸೆರೆವಾಸದಿಂದ ಬಿಡುಗಡೆಗೊಂಡ ಬಳಿಕ ಅಮೆರಿಕದ ಸಂಸತ್ ನಲ್ಲಿ ಜರ್ಮನ್ ಕವಿ ಮಾರ್ಟಿನ್ ನಿಮೋಲ್ಲರ್ ಹೇಳಿದ ಮಾತುಗಳು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News