ಪೌರತ್ವ ಕಾಯ್ದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲಿರುವ ಕಾಂಗ್ರೆಸ್

Update: 2019-12-19 05:43 GMT

ಹೊಸದಿಲ್ಲಿ,ಡಿ.13: ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಈ ನಿರಂಕುಶ ಕಾನೂನು ಸಾಂವಿಧಾನಿಕ ಗುಣಲಕ್ಷಣಗಳನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಲ್ಲಿಸಿರುವ ಅರ್ಜಿಯು ನೂತನ ಕಾನೂನು ನೆರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರಿಗೆ ಪೌರತ್ವವನ್ನು ನೀಡದಿರುವ ಮೂಲಕ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿದೆ.

ಶುಕ್ರವಾರ ಬೆಳಿಗ್ಗೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತನ್ನ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂಬ ಮೊಯಿತ್ರಾ ಅವರ ಕೋರಿಕೆಯನ್ನು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಹೊಸ ದಿನಾಂಕವನ್ನು ಪಡೆದುಕೊಳ್ಳುವಂತೆ ಅವರ ಪರ ವಕೀಲರಿಗೆ ಸೂಚಿಸಿದರು.

ಮೊಯಿತ್ರಾಗಿಂತ ಮೊದಲು ಐಯುಎಂಎಲ್ ಕೂಡ ನೂತನ ಕಾನೂನನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು,ಈ ಕಾನೂನು ಸಂವಿಧಾನದಲ್ಲಿಯ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದೆ ಮತ್ತು ಧರ್ಮದ ಆಧಾರದಲ್ಲಿ ಅಕ್ರಮ ವಲಸಿಗರ ಒಂದು ವರ್ಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News