ರೈತರ ಬದುಕಿಗೆ ಕೃಷಿಯೇತರ ಚಟುವಟಿಕೆ ಅತಿಮುಖ್ಯ: ಸಿಎಂ ಯಡಿಯೂರಪ್ಪ

Update: 2019-12-12 14:14 GMT

ಬೆಂಗಳೂರು, ಡಿ.12: ರೈತರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮಾತ್ರವಲ್ಲದೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗುವುದು ಅತಿಮುಖ್ಯವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಪಶು ವೈದ್ಯಕೀಯ ಮಹಾದ್ಯಾಲಯದ ಆವರಣದಲ್ಲಿ ಪಶುಪಾಲನಾ ಭವನ ಹಾಗೂ ಪಶುವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬಹುಮುಖ್ಯವಾಗಿ ಪಶುಸಂಗೋಪನೆಯಲ್ಲಿ ತೊಡಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದರು.

ಪಶುಸಂಪತ್ತು ದೇಶದ ಸಂಪತ್ತು ಎಂಬ ನಾಣ್ಣುಡಿಯಂತೆ, ಕೃಷಿ ಹಾಗೂ ಪಶುಸಂಗೋಪನೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಪಶುಸಂಗೋಪನೆಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ರಾಜ್ಯದ ಕೃಷಿ ಜಿಡಿಪಿಗೆ ಪಶುಸಂಗೋಪನೆಯು ಶೇ. 20.07ರಷ್ಟು ಮತ್ತು ಒಟ್ಟಾರೆ ಜಿಡಿಪಿಗೆ ಶೇ.2.03 ಆಗಿದೆ ಎಂದು ಅವರು ಮಾಹಿತಿ ನೀಡಿದರು.

ರೈತರಿಗೆ ಹೈನುಗಾರಿಕೆ ಮತ್ತು ಪಶುಪಾಲನೆ ಕೈಗೊಳ್ಳಲು ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ. ರಾಜ್ಯದ 8.45 ಲಕ್ಷ ಹಾಲು ಉತ್ಪಾದಕರಿಗೆ 238.12 ಕೋಟಿ ರೂ. ಪ್ರೋತ್ಸಾಹ ವಿತರಿಸಲಾಗಿದೆ. ವಲಸೆ ಕುರಿಗಾರರಿಗೆ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ನೀಡುವ ಕಾರ್ಯಕ್ರಮದಡಿ 1,675 ಬಡ ಸಂಚಾರಿ, ಅರೆ ಸಂಚಾರಿ ಕುರಿಗಾರರಿಗೆ 2.88 ಕೋಟಿ ರೂ. ವೆಚ್ಚದಲ್ಲಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದ 665 ನಿರುದ್ಯೋಗಿ ಯುವಕ, ಯುವತಿಯರಿಗೆ 30.61 ಲಕ್ಷ ರೂ.ಗಳ ಅನುದಾನದಲ್ಲಿ ಒಟ್ಟು 25,270 ಕೋಳಿ ಮರಿಗಳನ್ನು ವಿತರಿಸಲಾಗಿದೆ. ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆಗಳ 14,798 ಮಾಲಕರಿಗೆ 8.55 ಕೋಟಿ ರೂ. ಪರಿಹಾರ ಧನ ನೀಡಲಾಗಿದೆ. ಬರಗಾಲ ಮತ್ತು ಅತಿವೃಷ್ಟಿ ಸಮಯದಲ್ಲಿ ಜಾನುವಾರುಗಳಿಗೆ ಮೇವು, ನೀರು ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಜಾನುವಾರು ಶಿಬಿರ ನೀತಿಯನ್ನು ಸಹ ಹೊರಡಿಸಲಾಗಿದೆ ಎಂದು ಅವರು ಹೇಳಿದರು.

ಪಶುವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಅಗತ್ಯ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸರಕಾರ ಬದ್ಧವಾಗಿದೆ. ಇಲಾಖೆಯಲ್ಲಿ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಪಿಂಜ್ರಾಪೋಲ್ ಹಾಗೂ ಇತರೆ ಗೋಶಾಲೆಗಳಿಗೆ ನೆರವು, ಪಶುಭಾಗ್ಯ ಯೋಜನೆ, ಕ್ಷೀರಧಾರೆ ಯೋಜನೆ, ರಾಷ್ಟ್ರೀಯ ಗೋಕುಲ ಮಿಷನ್, ಜಾನುವಾರು ವಿಮೆ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ, ಕೃಷಿ ಮತ್ತು ರೇಷ್ಮೆ ಸಚಿವ ಲಕ್ಷ್ಮಣ ಸವದಿ, ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಸೇರಿದಂತೆ ಮತ್ತಿತರ ಹಿರಿಯ ಗಣ್ಯರು, ಅಧಿಕಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News