ದಿವಾಳಿತನ ಕಾನೂನಿಗೆ ತಿದ್ದುಪಡಿ ತರಲು ಲೋಕಸಭೆಯಲ್ಲಿ ಮಸೂದೆ ಪ್ರಸ್ತಾವ

Update: 2019-12-12 14:57 GMT

ಹೊಸದಿಲ್ಲಿ,ಡಿ.12: ಮಸೂದೆಯನ್ನು ಸ್ಥಾಯಿಸಮಿತಿಯ ಪರಿಶೀಲನೆಗೊಪ್ಪಿಸಬೇಕು ಎಂಬ ಪ್ರತಿಪಕ್ಷಗಳ ಆಗ್ರಹದ ನಡುವೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿವಾಳಿತನ ಕಾನೂನಿಗೆ ತಿದ್ದುಪಡಿಯನ್ನು ತರುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಪ್ರಸ್ತಾವಿಸಿದರು.

ಕಾರ್ಪೊರೇಟ್ ಸಂಸ್ಥೆಗಳ ದಿವಾಳಿ ನಿರ್ಣಯ ಪ್ರಕ್ರಿಯೆಯಲ್ಲಿ ತೊಡಕುಗಳನ್ನು ನಿವಾರಿಸಿ ಸುಗಮಗೊಳಿಸುವುದು ತಿದ್ದುಪಡಿಯ ಉದ್ದೇಶವಾಗಿದ್ದು,ಸಂಬಂಧಿತ ಕಂಪನಿಗಳ ಹಿಂದಿನ ಪ್ರವರ್ತಕರು ಎಸಗಿರುವ ಅಪರಾಧಗಳಿಗಾಗಿ ಕ್ರಿಮಿನಲ್ ಕಾನೂನು ಕ್ರಮವನ್ನು ಎದುರಿಸುವ ಅಪಾಯದಿಂದ ಯಶಸ್ವಿ ಬಿಡ್‌ದಾರರಿಗೆ ರಕ್ಷಣೆಯನ್ನು ಒದಗಿಸಲಿದೆ.

2016ರಲ್ಲಿ ಜಾರಿಗೆ ಬಂದಿರುವ ದಿವಾಳಿತನ ಕಾಯ್ದೆಗೆ ಈಗಾಗಲೇ ಮೂರು ಸಲ ತಿದ್ದುಪಡಿಗಳನ್ನು ಮಾಡಲಾಗಿದೆ. ಈಗ ಮಾಡಲುದ್ದೇಶಿಸಿರುವ ತಿದ್ದುಪಡಿಗಳು ವಿವಿಧ ಕಲಮ್‌ಗಳು ಮತ್ತು ಹೊಸ ಕಲಂ ಸೇರ್ಪಡೆಗೆ ಸಂಬಂಧಿಸಿವೆ.

 ಮಸೂದೆಯ ಉದ್ದೇಶವನ್ನು ವಿವರಿಸಿದ ಸೀತಾರಾಮನ್,ಸಣ್ಣ ಗೃಹ ಖರೀದಿದಾರರು ಮತ್ತು ಇತರರಲ್ಲಿ ಶಂಕೆಗಳಿರುವುದರಿಂದ ತಿದ್ದುಪಡಿಯನ್ನು ತರುವುದು ಅಗತ್ಯವಾಗಿದೆ ಎಂದರು.

ಎರಡು ದಿನಗಳ ಪೂರ್ವಭಾವಿ ನೋಟಿಸ್ ನೀಡಬೇಕೆಂಬ ಕಡ್ಡಾಯವನ್ನು ಉಲ್ಲಂಘಿಸಿ ಮಸೂದೆಯನ್ನು ಪ್ರಸ್ತಾವಿಸಿರುವುದನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ ಆಧಿರ ರಂಜನ ಚೌಧುರಿ ಅವರು,ದಿವಾಳಿತನ ಕಾನೂನಿಗೆ ಒಂದರ ಹಿಂದೊಂದರಂತೆ ತಿದ್ದುಪಡಿಗಳನ್ನು ತರಲಾಗುತ್ತಿದೆ ಮತ್ತು ಇದು ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಸರಕಾರದ ಅಸಮಂಜಸತೆಯನ್ನು ಸೂಚಿಸುತ್ತಿದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್,ಸಮಯದ ಕೊರತೆಯಿದ್ದರಿಂದ ಮಸೂದೆಯನ್ನು ಮಂಡಿಸಲು ತಾನು ಸಚಿವರಿಗೆ ಅವಕಾಶ ನೀಡಿದ್ದಾಗಿ ತಿಳಿಸಿದರು.

ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಚೌಧುರಿ ಸ್ಪೀಕರ್‌ರನ್ನು ಕೋರಿಕೊಂಡರು. ಟಿಎಂಸಿಯ ಸೌಗತ ರಾಯ್ ಅವರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News