ಕಳವು ಪ್ರಕರಣ: ನಾಲ್ವರ ಬಂಧನ, 64 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Update: 2019-12-12 15:28 GMT

ಬೆಂಗಳೂರು, ಡಿ.12: ಕಳವು ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 64 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೊಮ್ಮನಹಳ್ಳಿಯ ಬೇಗೂರು ಮುಖ್ಯ ರಸ್ತೆಯ ಅನಂತ್ ಕುಮಾರ್(31), ಸರ್ಜಾಪುರ ಮುಖ್ಯರಸ್ತೆ ಚನ್ನಸಂದ್ರದ ರಮೇಶ್ ಚಂದ್ರ ಶಾಹೊ(32), ಬೇಗೂರು ಮುಖ್ಯರಸ್ತೆಯ ವಿಶ್ವಜೀತ್(23), ದುಲಾಲ್ ಸಿಂಗ್ ಸಾಹು(33) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಬಂಧಿತರಿಂದ 64 ಲಕ್ಷ ಮೌಲ್ಯದ 1.6 ಕೆ.ಜಿ. ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ನಗರ ವ್ಯಾಪ್ತಿಯಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದಿದ್ದ 15 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒರಿಸ್ಸಾ ಮೂಲದವರಾಗಿದ್ದ ಬಂಧಿತರು, ಬಂಗಾಳಿ, ಓಡಿಯಾ ಭಾಷೆಯನ್ನು ಮಾತನಾಡುತ್ತಿದ್ದು, ಭಾಷೆಯಿಂದಲೇ ಪರಿಚಯ ಮಾಡಿಕೊಂಡು ಗುಂಪು ಕಟ್ಟಿಕೊಂಡಿದ್ದರು. ತಾವು ಕೆಲಸ ಮಾಡುವ ಮನೆ ಮಾಲಕರ ನಂಬಿಕೆ ಗಳಿಸುತ್ತಿದ್ದರು. ಬಳಿಕ ಹೊಂಚು ಹಾಕಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಕಳವು ಮಾಡಿದ ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಕೊಲ್ಕತ್ತಾಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಕೊಲ್ಕತ್ತಾ ಹಾಗೂ ಓರಿಸ್ಸಾದಲ್ಲಿ ಮನೆ ಗಳವು ಸೇರಿದಂತೆ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅಲ್ಲಿ ಹಳೆ ಆರೋಪಿಗಳಾಗಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲದೀಪ್ ಕುಮಾರ್ ಸಿಂಗ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News