ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಸಂಘಟಿತ ಕಾರ್ಮಿಕರಿಂದ ‘ವಿಧಾನಸೌಧ ಚಲೋ’

Update: 2019-12-12 15:35 GMT

ಬೆಂಗಳೂರು, ಡಿ.12: ರಾಜ್ಯ ಸರಕಾರ ಭವಿಷ್ಯ ನಿಧಿ ಕಾನೂನು ಜಾರಿಗೊಳಿಸುವ ಜೊತೆಗೆ, ಅಸಂಘಟಿತ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ಸಾವಿರಾರು ಅಸಂಘಟಿತ ಕಾರ್ಮಿಕರು ‘ವಿಧಾನಸೌಧ ಚಲೋ’ ಧರಣಿ ನಡೆಸಿದರು.

ಗುರುವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಮೈದಾನದವರೆಗೂ ಕಾಲ್ನಡಿಗೆ ಮೂಲಕ ಅಸಂಘಟಿಕ ಕಾರ್ಮಿಕರು ಮೆರವಣಿಗೆ ಸಾಗಿ, ಸರಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕ ಇಲಾಖೆ ರೂಪಿಸಿದ ಭವಿಷ್ಯ ನಿಧಿ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಪೂರಕವಾಗಿದೆ. ಹಾಗಾಗಿ, ಇದನ್ನು ಶೀಘ್ರದಲ್ಲಿಯೇ ಜಾರಿಗೊಳಿಸಬೇಕು. ಅದೇ ರೀತಿ, ಮುಂದಿನ ವಾರ್ಷಿಕ ಸಾಲಿನ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಕನಿಷ್ಠ 500 ಕೋಟಿ ಅನುದಾನ ಮೀಸಲಿಡಬೇಕು ಎಂದು ಧರಣಿ ನಿರತರು ಒತ್ತಾಯ ಮಾಡಿದರು.

ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಮನೆಗೆಲಸ ಮಾಡುವವರು, ಆಟೊ, ಟ್ಯಾಕ್ಸಿ ಚಾಲಕರು ಸೇರಿ ಹಲವು ವಲಯಗಳಲ್ಲಿ ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ.60ರಷ್ಟು ಕೊಡುಗೆ ಕಾರ್ಮಿಕರದ್ದು. ಆದರೆ, ಕನಿಷ್ಠ ವೇತನ, ಪಿಂಚಣಿ, ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಉದ್ದೇಶದಿಂದ 2009ರಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ರಚನೆಯಾಗಿದೆ. ಇದರಂತೆ ಮಕ್ಕಳಿಗೆ ಉಚಿತ ಶಿಕ್ಷಣ, ಅಪಘಾತ ಪರಿಹಾರ, ವಸತಿ ಹಾಗೂ ಪಿಂಚಣಿ ಸೇರಿ ಅನೇಕ ಸೌಲಭ್ಯಗಳು ಸಿಗಬೇಕಿತ್ತು. ಆದರೆ, ಅನುದಾನದ ಕೊರತೆಯ ನೆಪದಲ್ಲಿ ಈ ಸೌಲಭ್ಯ ಈವರೆಗೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಯೂನಿಯನ್ ಅಧ್ಯಕ್ಷ ಕೆ.ಎನ್.ಉಮೇಶ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುಝೀಬ್, ಖಜಾಂಚಿ ಬಸಮ್ಮ, ಹೋರಾಟಗಾರ್ತಿ ಎಸ್.ವರಲಕ್ಷ್ಮೀ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಅಸಂಘಟಿತ ಕಾರ್ಮಿಕರ ಹಿತಕ್ಕೆ ಬದ್ಧ’

ಅಸಂಘಟಿತ ಕಾರ್ಮಿಕರ ಮೂಲಕ ಸಮಸ್ಯೆಗಳಿಗೆ ಶಾಶ್ವತ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದರು.

ವಿಧಾನಸೌಧ ಚಲೋ ಧರಣಿಯಲ್ಲಿ ಅಸಂಘಟಿಕ ಕಾರ್ಮಿಕರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕಾರ್ಮಿಕರ ಪ್ರಗತಿ ಸಂಬಂಧ ಸರಕಾರ ಕ್ರಮ ಕೈಗೊಳ್ಳಲಿದ್ದು, ಈ ಬಗ್ಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News