ಸ್ನೇಹಿತೆ, ಕ್ಯಾಬ್ ಚಾಲಕನ ಹತ್ಯೆಗೈದ ಜಿಮ್ ಮಾಲಕನ ಬಂಧನ

Update: 2019-12-12 15:46 GMT

ಗಾಂಧಿನಗರ, ಡಿ.12: ತನ್ನ ಸ್ನೇಹಿತೆಯನ್ನು ಹಾಗೂ ಕ್ಯಾಬ್ ಚಾಲಕನನ್ನು ಹತ್ಯೆಗೈದು ಪರಾರಿಯಾಗಿದ್ದ ದಿಲ್ಲಿಯ ಜಿಮ್ ಮಾಲಕನನ್ನು ಬುಧವಾರ ರಾಜಸ್ತಾನದಲ್ಲಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು ಹೇಮಂತ್ ಲಾಂಬ ಎಂದು ಗುರುತಿಸಲಾಗಿದೆ. ಈತ ಅಂತರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುವಾಗಿದ್ದು ದಿಲ್ಲಿಯಲ್ಲಿ ಜಿಮ್ ಒಂದರ ಮಾಲಕನಾಗಿದ್ದ. ಇದೇ ಪ್ರದೇಶದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ರಾಜಸ್ತಾನ ಮೂಲದ 22 ವರ್ಷದ ಯುವತಿಯ ಸ್ನೇಹ ಬೆಳೆಸಿದ್ದ.

ಡಿಸೆಂಬರ್ 7ರಂದು ಯಾವುದೋ ವಿಷಯದಲ್ಲಿ ಇಬ್ಬರ ಮಧ್ಯೆ ಜಗಳವಾಗಿದ್ದು ಯುವತಿಯ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಲಾಂಬ ಬಳಿಕ ಕ್ಯಾಬ್ ಒಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಪರಾರಿಯಾಗಿದ್ದ. ಜೈಪುರಕ್ಕೆ ಹೋಗಬೇಕೆಂದು ಕ್ಯಾಬ್ ಚಾಲಕನಿಗೆ ತಿಳಿಸಿದ್ದು ದಾರಿ ಮಧ್ಯೆ ಚಾಲಕನನ್ನು ಗುಂಡಿಕ್ಕಿ ಹತ್ಯೆಗೈದು ಕಾರನ್ನು ತಾನೇ ಚಲಾಯಿಸಿಕೊಂಡು ಗುಜರಾತ್‌ನ ವಲ್ಸಾದ್ ತಲುಪಿದ್ದ. ಅಲ್ಲಿ ಕಾರನ್ನು ಮಾರುವುದಾಗಿ ಸ್ಥಳೀಯ ವ್ಯಾಪಾರಿ ಅಲ್ಪೇಶ್ ಎಂಬಾತನಿಗೆ ತಿಳಿಸಿದ್ದ.

ಲಾಂಬ ಕಾರು ಮಾರಲು ಅವಸರ ಮಾಡುತ್ತಿದ್ದುದನ್ನು ಗಮನಿಸಿದ ಅಲ್ಪೇಶ್‌ಗೆ ಶಂಕೆ ಮೂಡಿದೆ. ಈ ಮಧ್ಯೆ, ಕಾರಿನ ಬದಿಯಲ್ಲಿದ್ದ ಮೊಬೈಲ್ ನಂಬರ್ ಗಮನಿಸಿದ ಅಲ್ಪೇಶ್ ಆ ನಂಬರ್‌ಗೆ ಫೋನ್ ಮಾಡಿದಾಗ ಕ್ಯಾಬ್ ಚಾಲಕನ ಪತ್ನಿ ಸ್ವೀಕರಿಸಿದ್ದಾಳೆ. ಈ ವೇಳೆ ಸಂಶಯ ಬಲಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News