ಮಹಾರಾಷ್ಟ್ರ ಖಾತೆ ಹಂಚಿಕೆ: ಕಾಂಗ್ರೆಸ್, ಎನ್‌ಸಿಪಿಗೆ ಸಿಕ್ಕಿದ್ದೇನು ?

Update: 2019-12-12 16:09 GMT

ಮುಂಬೈ, ಡಿ.12: ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ವಾರಗಳ ಬಳಿಕ ಸಂಪುಟ ಸಚಿವರ ಖಾತೆ ಹಂಚಿಕೆಗೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಕೊನೆಗೆ ಸಹಮತವೇರ್ಪಟ್ಟಿದೆ.

ಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಶಿವಸೇನೆಗೆ ಗೃಹ ಹಾಗೂ ನಗರಾಭಿವೃದ್ಧಿ ಖಾತೆಗಳು ದೊರೆತರೆ, ವಿತ್ತ ಹಾಗೂ ವಸತಿ ಖಾತೆ ಶರದ್ ‌ಪವಾರ್ ನೇತೃತ್ವದ ಎನ್‌ಸಿಪಿಯ ಪಾಲಾಗಿವೆ. ಕಂದಾಯ ಇಲಾಖೆ ಕಾಂಗ್ರೆಸ್‌ನ ಕೈಸೇರಿದೆ.

ಶಿವಸೇನಾ ನಾಯಕ ಏಕನಾಥ ಶಿಂಧೆ ಅವರಿಗೆ ಅರಣ್ಯ ಹಾಗೂ ಪರಿಸರ, ಜಲಸಂರಕ್ಷಣೆ ಹಾಗೂ ನೈರ್ಮಲೀಕರಣ, ಪ್ರವಾಸೋದ್ಯಮ, ಮಣ್ಣು ಹಾಗೂ ಸಂರಕ್ಷಣೆ, ಸಂಸದೀಯ ವ್ಯವಹಾರಗಳು, ನಿವೃತ್ತ ಸೈನಿಕರ ಕಲ್ಯಾಣ ಖಾತೆಗಳು ದೊರೆತಿವೆ. ಇನ್ನೂ ಮಹತ್ವದ ಖಾತೆಯಾದ ಲೋಕೋಪಯೋಗಿ ಇಲಾಖೆ ಕೂಡಾ ಶಿವಸೇನೆಗೆ ದೊರೆತಿದೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಮಂಗಳವಾರ ಸಂಜೆ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮೂರು ಪಕ್ಷಗಳ ನಡುವೆ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಿದ್ದರು. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಕೂಡಾ ಉಪಸ್ಥಿತರಿದ್ದರು.

ಹಣಕಾಸು ಹಾಗೂ ವಸತಿ ಖಾತೆಯ ಜೊತೆಗೆ ಎನ್ ಸಿಪಿಗೆ ಗ್ರಾಮೀಣ ಅಭಿವೃದ್ಧಿ ಜಲಸಂಪನ್ಮೂಲ, ವಿಶೇಷ ನೆರವು ಹಾಗೂ ಸಾಮಾಜಿಕ ನ್ಯಾಯ, ಅಬಕಾರಿ, ಕೌಶಲ್ಯಾಭಿವೃದ್ಧಿ, ವೈದ್ಯಕೀಯ ಆಡಳಿತ ಖಾತೆಗಳು ದೊರೆಯಲಿವೆ.

ಕಾಂಗ್ರೆಸ್‌ಗೆ ವಿದ್ಯುತ್ ಹಾಗೂ ನವೀಕರಣಯೋಗ್ಯ ಇಂಧನ,ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ, ಪಶುಸಂಗೋಪನೆ, ಹೈನುಗಾರಿಕೆ ಅಭಿವೃದ್ಧಿ ಹಾಗೂ ಮೀನುಗಾರಿಕೆ ಇಲಾಖೆಗಳು ದೊರೆತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News