ದುರಸ್ತಿಯಲ್ಲಿರುವ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ನೀಡಲು ಸಿಇಓಗಳಿಗೆ ಸೂಚನೆ

Update: 2019-12-12 17:15 GMT

ಬೆಂಗಳೂರು, ಡಿ. 12: ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ನೀಡಲು ಎಲ್ಲ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಕೂಡಲೇ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 18 ಸಾವಿರ ಶುದ್ಧಿ ಕುಡಿಯುವ ನೀರಿನ ಘಟಕಗಳ ಪೈಕಿ 16 ಸಾವಿರ ಘಟಕಗಳು ದುರಸ್ತಿಯಲ್ಲಿದ್ದು, ಈ ಬಗ್ಗೆ ಹಲವು ದೂರುಗಳಿವೆ. ಹೀಗಾಗಿ ಹೊಸ ಘಟಕಗಳ ಸ್ಥಾಪನೆ ಸ್ಥಗಿತಗೊಳಿಸಲಾಗಿದೆ ಎಂದರು.

ಹಿಂದಿನ ಸರಕಾರ ರಾಜ್ಯ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಟೆಂಡರ್ ಪಡೆದ ಕಂಪೆನಿ ಹಣ ಪಡೆದು ನಾಪತ್ತೆಯಾಗಿದೆ ಎಂದು ದೂರಿದ ಅವರು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನರಿಗೆ ಅನುಕೂಲ ಆಗಬೇಕು: ಆಶ್ರಯ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಅಧಿಕಾರ ಗ್ರಾಮಸಭೆ ಬದಲಿಗೆ ಅಧಿಕಾರಿಗಳಿಗೆ ನೀಡುವ ಸಂಬಂಧ ವಸತಿ ಇಲಾಖೆ ಹೊಸ ಕಾಯ್ದೆಗೆ ನಮ್ಮ ವಿರೋಧವಿಲ್ಲ. ಆದರೆ, ಜನರಿಗೆ ಅನುಕೂಲ ಆಗಬೇಕೆಂಬುದಷ್ಟೇ ನಮ್ಮ ಅಪೇಕ್ಷೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರದಿಂದ 800 ಕೋಟಿ ರೂ.ಗಳಷ್ಟು ಬಾಕಿ ಬರಬೇಕಿದ್ದು, ಅದನ್ನು ಬಿಡುಗಡೆ ಮಾಡಲು ಕೋರಲಾಗಿದೆ. ಅಲ್ಲದೆ, ವಾರ್ಷಿಕ 100 ಮಾನವ ದಿನಗಳ ಬದಲಿಗೆ 150 ದಿನಗಳಿಗೆ ಹೆಚ್ಚಳ ಮಾಡಿದ್ದು, ಇದರಿಂದ 1 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿನ ನೆರವು ಸಿಗಲಿದೆ. 104 ತಾಲೂಕುಗಳಲ್ಲಿನ ನೆರೆ ಪೀಡಿತ ಜನರಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News