ಸಿಸ್ಟರ್ ಬಿನಿ ಮೋಲ್‌ಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ

Update: 2019-12-12 17:39 GMT

ಬೆಂಗಳೂರು, ಡಿ.12: ಮಾಲತಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ಶುಶ್ರೂಷಾ ಮೇಲ್ವಿಚಾರಕಿ ಬಿನಿ ಮೋಲ್ ಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೇಲ್ 2019 ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದಾನ ಮಾಡಿದರು.

ದಾದಿಯೊಬ್ಬರಿಗೆ ನೀಡಲಾಗುವ ಅತ್ಯುನ್ನತ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಇದಾಗಿದೆ. ಇದನ್ನು ನೈಸರ್ಗಿಕ ವಿಕೋಪ ಪೀಡಿತರಿಗೆ ಆರೈಕೆ ನೀಡುವಲ್ಲಿ ಅಸಾಧಾರಣ ಧೈರ್ಯ ಮತ್ತು ಸಮರ್ಪಣಾ ಮನೋಭಾವ ತೋರಿದ ಬಿನಿಮೋಲ್‌ರನ್ನು ಗುರುತಿಸಿ ನೀಡಲಾಗಿದೆ.

ಈ ವೇಳೆ ಮಾತನಾಡಿದ ಬಿನಿ ಮೋಲ್, ನನ್ನ ಕೆಲಸದಲ್ಲಿ ನಂಬಿಕೆ ಇಟ್ಟುಕೊಂಡಿದ್ದಕ್ಕಾಗಿ ಹಾಗೂ ಮಣಿಪಾಲ್ ಕುಟುಂಬದ ಭಾಗವಾಗಿರಲು ಅವಕಾಶ ಪೂರೈಸಿದ್ದಕ್ಕಾಗಿ ನಾನು ಈ ಸಮಯದಲ್ಲಿ ಮಣಿಪಾಲ್ ಆಸ್ಪತ್ರೆಗೆ ವಂದನೆ ಸಲ್ಲಿಸುತ್ತೇನೆ. ದಾದಿಯರಿಗೆ ಅವರ ಕಠಿಣ ಶ್ರಮಕ್ಕಾಗಿ ಗುರುತಿಸುತ್ತಿರುವುದಕ್ಕೆ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಸಿಸ್ಟರ್ ಬಿನಿ ಮೋಲ್ 2008ರಲ್ಲಿ ಮಣಿಪಾಲ್ ಆಸ್ಪತ್ರೆಯನ್ನು ಸೇರಿಕೊಂಡಿದ್ದು, ಕಳೆದ 11 ವರ್ಷದಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೊರರೋಗಿ ಮತ್ತು ತುರ್ತು ಸೇವೆ ವಿಭಾಗಕ್ಕೆ ಕೆಲಸಕ್ಕೆ ಸೇರಿದ ಅವರು, ಅನಂತರ ದಾದಿಯ ಮುಖ್ಯಸ್ಥೆಯಾಗಿದ್ದಾರೆ. ಇದಕ್ಕೆ ಅವರ ಸತತ ಮತ್ತು ಸ್ವಾರ್ಥ ರಹಿತ ಸೇವೆಯೇ ಕಾರಣವಾಗಿದೆ ಎಂದು ಆಸ್ಪತ್ರೆಯು ಪ್ರಕಟನೆಯಲ್ಲಿ ತಿಳಿಸಿದೆ.

ಸಿಸ್ಟರ್ ಬಿನಿ ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಲ್ಲಿ ನಡೆಯುವಂತಹ ಬಹುತೇಕ ಆರೋಗ್ಯ ಶಿಬಿರಗಳಿಗೆ ಸಮನ್ವಯಕಾರರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸರಕಾರದ ರುಬೆಲ್ಲಾ ಮತ್ತು ಮೀಸಲ್ಸ್ ಲಸಿಕೆ ಅಭಿಯಾನದಲ್ಲಿಯೂ ಭಾಗಿಯಾಗಿದ್ದು, ಇದುವರೆಗೂ 800 ಮಕ್ಕಳಿಗೆ ಲಸಿಕೆ ನೀಡಿದ್ದಾರೆ ಎಂದು ಪ್ರಕಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News