ಕಾಂಗ್ರೆಸ್ ಎನ್ನುವ ದಳಪತಿಯಿಲ್ಲದ ಮನೆ

Update: 2019-12-13 05:38 GMT

ಉಪಚುನಾವಣೆಯನ್ನು ಬಿಜೆಪಿ ಗೆದ್ದುಕೊಂಡಿತು. ಯಡಿಯೂರಪ್ಪ ಸರಕಾರ ಸುಭದ್ರವಾಯಿತು ಎನ್ನುವುದೊಂದು ದುಃಖ, ತಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರನ್ನು ಅಧಿಕೃತವಾಗಿ ಕಳೆದುಕೊಂಡ ದುಃಖ ಎರಡೂ ಕಾಂಗ್ರೆಸ್‌ನದ್ದಾಗಿದೆ. ಸುಪ್ರೀಂಕೋರ್ಟ್ ಶಾಸಕರನ್ನು ಬಹಿರಂಗವಾಗಿ ‘ಅನರ್ಹರು’ ಎಂದು ಕರೆದಿದ್ದರೂ, ಅದನ್ನು ಬಳಸಿಕೊಂಡು ಅವರ ವಿರುದ್ಧ ಜನಮತ ಸಂಗ್ರಹಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಈ ಸಣ್ಣ ಯುದ್ಧದಲ್ಲಿ ಕಾಂಗ್ರೆಸ್ ಕಳೆದುಕೊಂಡದ್ದು ಅತ್ಯಂತ ದೊಡ್ಡದು. ಒಂದು ಸರಕಾರದ ಅಳಿವು ಉಳಿವಿನಲ್ಲಿ ನೇರ ಪಾತ್ರ ವಹಿಸಿದ ಉಪಚುನಾವಣೆ ಇದಾಗಿರುವುದರಿಂದ, ಸೋಲಿಗೆ ದೊಡ್ಡ ದೊಡ್ಡ ತಲೆಗಳೇ ಕೆಳಗುರುಳಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ಸಿದ್ದರಾಮಯ್ಯ ತಮ್ಮ ರಾಜೀನಾಮೆ ನೀಡಿ, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

 12 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ತನ್ನ ಜೊತೆಗಿರುವ ನಾಯಕರ ಜೊತೆಗಿನ ವಿಶ್ವಾಸದಿಂದಲೋ, ಸುಪ್ರೀಂಕೋರ್ಟ್‌ನ ‘ಅನರ್ಹ’ ಪದವಿಯ ಮೇಲಿನ ಆತ್ಮವಿಶ್ವಾಸದಿಂದಲೋ ಅಥವಾ ಮತದಾರರ ಮೇಲಿನ ನಂಬಿಕೆಯಿಂದಲೋ ಅಂತೂ ಅವರು ಕನಿಷ್ಠ ಹತ್ತು ಸ್ಥಾನಗಳನ್ನಾದರೂ ಗೆದ್ದುಕೊಳ್ಳುವ ಭರವಸೆಯಲ್ಲಿದ್ದರು. ಆದರೆ ಫಲಿತಾಂಶ ಅವರಿಗೆ ವಿರುದ್ಧವಾಗಿ ಹೊರಬಿತ್ತು. ರಾಜೀನಾಮೆಯಲ್ಲದೆ ಬೇರಾವ ಪ್ರಕ್ರಿಯೆಯಿಂದಲೂ ಈ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಸ್ಪಷ್ಟವಿತ್ತು. ಆದುದರಿಂದ ಪಕ್ಷ ಕೇಳುವ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಂತೆ ಇದ್ದ ಜಟಾಪಟಿಗಳನ್ನೂ ಉಪಚುನಾವಣೆ ಪರಿಹರಿಸಿತು. ದಿನೇಶ್ ಗುಂಡೂರಾವ್ ಕೂಡ, ಕೇಳದೆಯೇ ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದೀಗ ಎಲ್ಲ ಬೆಳವಣಿಗೆಗಳನ್ನು ತನಗೆ ಪೂರಕವಾಗಿ ಯಾವ ರೀತಿ ಬಳಸಿಕೊಳ್ಳಬಹುದು ಎಂದು ವನವಾಸ ಮುಗಿಸಿ ಬಂದಿರುವ ಡಿ.ಕೆ. ಶಿವಕುಮಾರ್ ಲೆಕ್ಕ ಹಾಕುತ್ತಿದ್ದಾರೆ.

ಕಾಂಗ್ರೆಸ್‌ನ ಸದ್ಯದ ದೊಡ್ಡ ಸಮಸ್ಯೆಯೆಂದರೆ ರಾಜೀನಾಮೆಯನ್ನು ಸ್ವೀಕರಿಸುವುದೇನೋ ಸರಿ, ಆದರೆ ಆ ಸ್ಥಾನಕ್ಕೆ ಕೂರಿಸುವುದಕ್ಕೆ ಸೂಕ್ತ ನಾಯಕರೇ ಇಲ್ಲ ಎನ್ನುವ ವಾತಾವರಣವಿದೆ. ಇದು ಕಾಂಗ್ರೆಸ್‌ನ ಸ್ವಯಂಕೃತಾಪರಾಧ. ಕಾಂಗ್ರೆಸ್‌ನ ಹಿರಿಯರು ಹೊಸ ನಾಯಕರನ್ನು ಬೆಳೆಸುವುದಕ್ಕೆ ಯಾವ ಪ್ರಯತ್ನವನ್ನೂ ಈವರೆಗೆ ಮಾಡಿಲ್ಲ್ಲ. ತರುಣರಿಗೆ ಅವಕಾಶ ನೀಡಿದರೆ ಅವರು ತಮಗೆ ಸ್ಪರ್ಧಿಯಾಗಿ ಬೆಳೆಯಬಹುದೇನೋ ಎನ್ನುವ ಕಾರಣಕ್ಕಾಗಿ, ಯುವಕರನ್ನು ಆರಿಸುವಾಗಲೂ ಚೇಲಾಗಳಿಗೆ ಆದ್ಯತೆಯನ್ನು ನೀಡುತ್ತಾ ಬಂದರು. ಹಿರಿಯರು ತಮ್ಮ ಆಯಸ್ಸಿನ ಕೊನೆಯ ಗುಟುಕು ಇರುವವರೆಗೂ ಅಧಿಕಾರ ಅನುಭವಿಸಿ, ಅಧಿಕಾರ ಇನ್ನು ದಕ್ಕುವುದೇ ಇಲ್ಲ ಎನ್ನುವಾಗ, ಕಾಂಗ್ರೆಸ್‌ಗೆ ತಿರುಗಿ ನಿಂತು ವಿರೋಧ ಪಕ್ಷಗಳಿಂದ ಸಿಕ್ಕಿದ್ದನ್ನು ಬಾಚಿಕೊಂಡರು. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದೆ ಎಸ್. ಎಂ. ಕೃಷ್ಣ ಅವರಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸನ್ನು ಇದೇ ತಂತ್ರದ ಮೂಲಕ ಜನಾರ್ದನ ಪೂಜಾರಿ ಮುಗಿಸಿದರು. ಕಾಂಗ್ರೆಸ್‌ನೊಳಗೆ ಅತ್ಯಂತ ಮುತ್ಸದ್ದಿ ನಾಯಕರಾಗಿ ಬೆಳೆಯಬಹುದಾಗಿದ್ದ ಬಿ.ಎ.ಉಮರಬ್ಬ, ಬಿ.ಎ.ಮೊಹಿದೀನ್‌ರಂತಹ ಹಲವು ಮುಸ್ಲಿಮ್ ನಾಯಕರನ್ನು ಮುಗಿಸಿದ ಹೆಗ್ಗಳಿಕೆ ಜನಾರ್ದನ ಪೂಜಾರಿಯವರಿಗೆ ಸಲ್ಲಬೇಕು. ಇದೇ ಸಂದರ್ಭದಲ್ಲಿ ಸ್ವಂತಿಕೆಯಲ್ಲದೆ, ರಾಜಕೀಯವಾಗಿ ಪ್ರಬುದ್ಧರಲ್ಲದ ಮುಸ್ಲಿಮ್ ನಾಯಕರಿಗೆ ಕಾಂಗ್ರೆಸ್‌ನೊಳಗೆ ಅವಕಾಶಗಳನ್ನು ನೀಡಿದರು. ಒಂದು ರೀತಿಯಲ್ಲಿ ಕೊಟ್ಟಂತೆ ಮಾಡಿ ಕಿತ್ತುಕೊಂಡರು. ಸೋಲಿನ ಮೇಲೆ ಸೋಲು ಅನುಭವಿಸಿದರೂ, ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರುವವರೆಗೆ ಮಂಗಳೂರು ಲೋಕಸಭಾ ಟಿಕೆಟನ್ನು ಇನ್ನೊಬ್ಬರಿಗೆ ನೀಡಲು ಅವಕಾಶ ನೀಡದೆ ಕರಾವಳಿಯಲ್ಲಿ ಬಿಜೆಪಿಯನ್ನು ಬೆಳೆಸಿದ ಹೆಗ್ಗಳಿಕೆ ಪೂಜಾರಿಯವರಿಗೆ ಸಲ್ಲಬೇಕು. ಇದೀಗ ತನ್ನ ವೃದ್ಧಾಪ್ಯದ ದಿನಗಳಲ್ಲಿ ಅವರು ಆರೆಸ್ಸೆಸ್ ಭಜನೆ ಮಾಡುತ್ತಾ ಓಡಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗೂ ಹಲವರು ಗೆದ್ದುಕೊಂಡ ಖುಷಿಯಲ್ಲಿದ್ದಾರೆ. ಸಿದ್ದರಾಮಯ್ಯ ಹೊರಗಿನವರು ಎನ್ನುವ ಅಸಹನೆ ಕಾಂಗ್ರೆಸ್‌ನೊಳಗೆ ಇನ್ನೂ ಉಳಿದಿದೆ. ಆದರೆ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನೊಳಗೆ ಕಾಲಿಡದೇ ಇದ್ದಿದ್ದರೆ ಅದು ಎಂದೋ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿತ್ತು. ಎಸ್. ಎಂ. ಕೃಷ್ಣ ಕಾರಣದಿಂದ ಪಾತಾಳ ತಲುಪಿದ್ದ ಕಾಂಗ್ರೆಸನ್ನು ಮತ್ತೆ ಮೇಲೆತ್ತಿದ್ದು ಸಿದ್ದರಾಮಯ್ಯ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಆಗಮಿಸುವ ವೇಳೆಗೆ ಖರ್ಗೆ, ಧರಂಸಿಂಗ್ ಮೊದಲಾದ ನಾಯಕರು ಬಿಜೆಪಿಯ ಅಬ್ಬರದ ಸ್ವರಗಳಿಗೆ ಸುಸ್ತಾಗಿ ಕೂತಿದ್ದರು. ಯಾವಾಗ ಸಿದ್ದರಾಮಯ್ಯ ತನ್ನ ವರ್ಚಸ್ಸನ್ನು ಕಾಂಗ್ರೆಸ್‌ನೊಳಗೆ ವಿಸ್ತರಿಸಿಕೊಂಡರೋ, ಆಗ ಡಿ.ಕೆ. ಶಿವಕುಮಾರ್‌ರಂತಹ ದುಡ್ಡಿನ ಮೂಲಕವೇ ನಾಯಕರಾಗಿ ಬೆಳೆದವರಿಗೆ ಇರಿಸುಮುರಿಸು ಆರಂಭವಾಯಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಜನಪ್ರಿಯತೆ ದಿಲ್ಲಿಯವರೆಗೆ ಹರಡಿತು. ಆದುದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಲ ಕಾಂಗ್ರೆಸಿಗರಿಗೆ ಬಿಜೆಪಿಯನ್ನು ಸೋಲಿಸುವುದಕ್ಕಿಂತ ಸಿದ್ದರಾಮಯ್ಯರನ್ನು ಸೋಲಿಸುವುದು ಮುಖ್ಯವಾಗಿ ಕಂಡಿತು.

ಅತಂತ್ರ ಫಲಿತಾಂಶ ಹೊರಬಿದ್ದಾಕ್ಷಣ, ಯಾವುದೇ ಶರತ್ತು ವಿಧಿಸದೇ ಜೆಡಿಎಸ್ ನಾಯಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿಸಲು ಮುಂದಾದದ್ದೂ ಸಿದ್ದರಾಮಯ್ಯರನ್ನು ಹೊರಗಿಡುವುದಕ್ಕಾಗಿ. ಆದರೆ ಬಳಿಕ ಆ ತಂತ್ರವೇ ತಿರುಗುಬಾಣವಾಯಿತು. ಈ ಬಾರಿಯ ಉಪಚುನಾವಣೆಯಲ್ಲೂ ಸಿದ್ದರಾಮಯ್ಯ ಏಕಾಂಗಿಯಾಗಿ ಹೋರಾಟ ನಡೆಸಬೇಕಾಗಿತ್ತು. ಸೋಲಿನ ಸರ್ವ ಹೊಣೆಯನ್ನು ಅವರ ತಲೆಗೆ ಕಟ್ಟುವುದು ಕಾಂಗ್ರೆಸ್‌ನೊಳಗಿರುವವರಿಗೂ ಅಗತ್ಯವಾಗಿತ್ತು. ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್‌ನೊಳಗಿರುವ ಕೆಲವು ಗುಂಪುಗಳು ಉಪಚುನಾವಣೆಯನ್ನು ಗೆದ್ದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಯಡವಟ್ಟುಗಳೂ ಅವರ ಪತನಕ್ಕೆ ಪೂರಕವಾಗಿ ಕೆಲಸ ಮಾಡಿರುವುದನ್ನು ನಿರಾಕರಿಸುವಂತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ತೋರಿಸಿದ ಪುತ್ರ ವಾತ್ಸಲ್ಯ ಅವರಿಗೆ ಮುಳುವಾಯಿತು. ಇದೇ ಸಂದರ್ಭದಲ್ಲಿ ರಾಜಕಾರಣದಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು ನಾಯಕನಾದವನ ಪ್ರಧಾನ ಗುಣವಾಗಿದೆ. ಅದೇನೇ ಭಿನ್ನಮತಗಳಿದ್ದರೂ ಭಿನ್ನರೊಂದಿಗೆ ಮಾತುಕತೆ ನಡೆಸಿ ಒಲಿಸಿಕೊಳ್ಳುವ ಅನಿವಾರ್ಯತೆಯಿದೆ. ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅದು ಸಾಧ್ಯವಾಗಿದೆ. ಹೀಗಿರುವಾಗ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರಿಗೂ ಸಾಧ್ಯವಾಗಬೇಕಾಗಿತ್ತು. ತಮ್ಮ ಮೊಂಡುತನಕ್ಕೆ ಅವರು ಕೊಟ್ಟ ಬೆಲೆಯಾಗಿದೆ ಉಪಚುನಾವಣಾ ಫಲಿತಾಂಶ. ಇದೀಗ ಕಾಂಗ್ರೆಸ್ ಸೇನಾಪತಿಯಿಲ್ಲದೆ ಗೊಂದಲದಲ್ಲಿದೆ.

ಡಿಕೆಶಿ ಅವರು ಕಾಂಗ್ರೆಸ್ ನಾಯಕತ್ವವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುವ ವದಂತಿಗಳಿವೆ. ಆದರೆ ಇತ್ತೀಚಿನ ಅವರ ರಾಜಕೀಯ ಬದುಕಿನ ಬೆಳವಣಿಗೆಗಳು ಅದಕ್ಕೆ ಪೂರಕವಾಗಿಲ್ಲ. ಪರಮೇಶ್ವರ್ ಸಂದರ್ಭದ ಲಾಭ ಪಡೆಯುವ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆಯೇ ಹೊರತು, ಪಕ್ಷವನ್ನು ಮರು ಸಂಘಟಿಸಿ ಮುನ್ನಡೆಸುವ ಶಕ್ತಿ ಅವರಲ್ಲಿ ಕಾಣುತ್ತಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ಗೆ ಅನಿವಾರ್ಯವಾಗಬಹುದು. ಇದೇ ಸಂದರ್ಭದಲ್ಲಿ ಹೊಸ ಯುವ ನಾಯಕರನ್ನು ರೂಪಿಸುವ ಅಗತ್ಯವನ್ನು ಕಾಂಗ್ರೆಸ್ ಇನ್ನಾದರೂ ಮನಗಾಣಬೇಕು. ಯುವಕರನ್ನು ತುಳಿದು ರಾಜಕೀಯ ನಡೆಸುವ ‘ಯಯಾತಿ’ ಮನಸ್ಥಿತಿಯಿಂದ ಹೊರಬಂದು, ಮುದುಕರು ತಮ್ಮ ವಯಸ್ಸನ್ನು ಒಪ್ಪಿಕೊಂಡು ಹಿಂದಿರುವವರಿಗೆ ದಾರಿ ಬಿಟ್ಟುಕೊಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News