ಬ್ರಿಟನ್: ಪ್ರಧಾನಿ ಬೋರಿಸ್ ಜಾನ್ಸನ್ ಪಕ್ಷಕ್ಕ ಭರ್ಜರಿ ಜಯ ನಿರೀಕ್ಷೆ

Update: 2019-12-13 04:02 GMT

ಲಂಡನ್, ಡಿ.13: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಾರ್ಟಿ ಭರ್ಜರಿ ಜಯ ಸಾಧಿಸುವ ನಿರೀಕ್ಷೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳಿಂದ ತಿಳಿದುಬಂದಿದೆ. ಇದರಿಂದಾಗಿ ಅವರು 2020ರ ಜನವರಿ 31ರ ಒಳಗಾಗಿ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.

ಮತಗಟ್ಟೆ ನಿರ್ಗಮನ ಸಮೀಕ್ಷೆಗಳ ಪ್ರಕಾರ 650 ಸದಸ್ಯಬಲದ ಸಂಸತ್ತಿನಲ್ಲಿ ಕನ್ಸರ್ವೇಟಿವ್ ಪಾರ್ಟಿ 368 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಲೇಬರ್ ಪಾರ್ಟಿ 191 ಸ್ಥಾನಗಳನ್ನು ಹಾಗೂ ಸ್ಕಾಟಿಷ್ ನ್ಯಾಷನಲ್ ಪಾರ್ಟಿ 55 ಮತ್ತು ಲಿಬರಲ್ ಡೆಮಾಕ್ರಾಟ್ಸ್ 13 ಸ್ಥಾನಗಳನ್ನು ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಕಳೆದ ಐದು ರಾಷ್ಟ್ರೀಯ ಚುನಾವಣೆಗಳ ಪೈಕಿ 2015ರಲ್ಲಿ ಒಂದು ಬಾರಿ ಮಾತ್ರ ನಿರ್ಗಮನ ಸಮೀಕ್ಷೆಯ ಫಲಿತಾಂಶ ತಪ್ಪಾಗಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಅತಂತ್ರ ಸಂಸತ್ತು ಎಂದು ಅಂದಾಜಿಸಲಾಗಿತ್ತು. ಆದರೆ ಕನ್ಸರ್ವೇಟಿವ್ ಪಾರ್ಟಿ ಅಂದಾಜಿಗಿಂತ 14 ಸ್ಥಾನಗಳನ್ನ ಹೆಚ್ಚಾಗಿ ಗೆದ್ದು ಬಹುಮತ ಸಾಧಿಸಿತ್ತು.

ಮಿಂಚಿನ ಚುನಾವಣೆಯಲ್ಲಿ ಜಾನ್ಸನ್ ಬಹುಮತ ಸಾಧಿಸಿದಲ್ಲಿ, ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ಪಡೆದು ಜನವರಿ 31ರ ಒಳಗಾಗಿ ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಹಾದಿ ಸುಗಮವಾಗಲಿದೆ. ಜನವರಿ 31ಕ್ಕೆ ಹೊರಬಂದಲ್ಲಿ ನಿಗದಿತ ಯೋಜನೆಗಿಂತ ಹತ್ತು ತಿಂಗಳು ವಿಳಂಬವಾದಂತಾಗಲಿದೆ.

2016ರ ಬ್ರೆಕ್ಸಿಟ್ ಜನಮತಗಣನೆಯಿಂದ ಆರಂಭಿಸಿದ ಅಭಿಯಾನವನ್ನು ಜಾನ್ಸನ್ ಯಶಸ್ವಿಯಾಗಿ ಮುಂದುವರಿಸಿದ್ದು, ಈ ಬಾರಿ "ಗೆಟ್ ಬ್ರೆಕ್ಸಿಟ್ ಡನ್" ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News