ಪ್ರಧಾನಿ ಮೋದಿ ದಿಲ್ಲಿಯನ್ನು ಅತ್ಯಾಚಾರಿಗಳ ರಾಜಧಾನಿ ಎಂದಿದ್ದರು: ರಾಹುಲ್ ಗಾಂಧಿ

Update: 2019-12-13 11:46 GMT

ಹೊಸದಿಲ್ಲಿ, ಡಿ.13: ‘ರೇಪ್ ಇನ್ ಇಂಡಿಯಾ ’ಎಂಬ ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಘಟನೆಯಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

 "ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯನ್ನು ಅತ್ಯಾಚಾರಿಗಳ ರಾಜಧಾನಿ ಎಂದು ಹೇಳಿರುವ ವಿಡಿಯೋ ಕ್ಲಿಪ್ ನನ್ನ ಮೊಬೈಲ್‌ನಲ್ಲಿದೆ. ಇದನ್ನು ಎಲ್ಲರೂ ನೋಡಲಿ ಎಂದು ಟ್ವೀಟ್ ಮಾಡಿದ್ದೇನೆ. ಈಶಾನ್ಯ ರಾಜ್ಯಗಳಲ್ಲಿನ ಪ್ರತಿಭಟನೆ ವಿಚಾರವನ್ನು ಬೇರೆಗೆ ಸೆಳೆಯುವ ಉದ್ದೇಶದಿಂದ ಬಿಜೆಪಿ ನನ್ನ ಹೇಳಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾವಿಸಿ ಗದ್ದಲ ಎಬ್ಬಿಸುತ್ತಿದೆ'' ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿದರು.

ನರೇಂದ್ರ ಮೋದಿ ದಿಲ್ಲಿಯನ್ನು ರೇಪ್ ಕ್ಯಾಪಿಟಲ್ ಎಂದಿರುವ ಕರೆದಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ರಾಹುಲ್, ಈಗ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ದೇಶದ ಆರ್ಥಿಕ ಸ್ಥಿತಿಯನ್ನು ನಾಶ ಮಾಡಿದ್ದಕ್ಕೆ ಹಾಗೂ ದಿಲ್ಲಿಯನ್ನು ಅತ್ಯಾಚಾರಿಗಳ ರಾಜಧಾನಿ ಎಂದು ಕರೆದಿರುವುದಕ್ಕೆ ಪ್ರಧಾನಿ ಮೋದಿ ದೇಶದ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

ಮೋದಿ ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಮಾತನಾಡುತ್ತಿದ್ದಾಗ ಎಲ್ಲ ಸುದ್ದಿಪತ್ರಿಕೆಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಕುರಿತ ಸುದ್ದಿಗಳೇ ತುಂಬಿರುತ್ತಿದ್ದವು. ಈಗ ದಿನ ಪತ್ರಿಕೆಗಳ ಪುಟ ತೆರೆದು ನೋಡಿದಾಗ ಭಾರತದಲ್ಲಿ ಅತ್ಯಾಚಾರದ ಸುದ್ದಿಗಳನ್ನೇ ನೋಡುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News