ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್‌ವೈ

Update: 2019-12-13 12:32 GMT

ಬೆಂಗಳೂರು, ಡಿ. 13: ನೆರೆ ಪೀಡಿತ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರಿಗೆ 1ಲಕ್ಷ ರೂ.ಬಿಡುಗಡೆಯಾಗಿದ್ದರೂ, ಸಂತ್ರಸ್ತರು ಮನೆ ನಿರ್ಮಿಸಲು ಮುಂದಾಗಿಲ್ಲ. ಇನ್ನೂ ಬೆಳೆ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದು ಆಡಳಿತ ಸಡಿಲಗೊಂಡಿರುವುದರ ಸಂಕೇತ. ಇನ್ನು ಮುಂದೆ ಇಂತಹ ಆರೋಪಗಳು ಕೇಳಿ ಬರಬಾರದು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳು ಸೇರಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ನೆರೆ ಪೀಡಿತ ಪ್ರದೇಶಗಳ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರದೊಳಗೆ ಜಿಲ್ಲೆಗಳಿಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.

ಭೂ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಮನೆ ನಿರ್ಮಿಸಲು ಸಾಧ್ಯವಾಗದ ಕಡೆಗಳಲ್ಲಿ ಪರ್ಯಾಯ ಜಮೀನು ಒದಗಿಸುವಂತೆ ಸೂಚನೆ ಕೊಟ್ಟಿದ್ದೇನೆ ಎಂದ ಅವರು, ಈವರೆಗೆ 5.06ಲಕ್ಷ ರೈತರಿಗೆ 785.94 ಕೋಟಿ ರೂ.ಬೆಳೆ ಪರಿಹಾರ ವಿತರಿಸಲಾಗಿದೆ. 37 ಸಾವಿರ ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರದ ಕಾರಣ ಪರಿಹಾರ ಪಾವತಿಗೆ ಅಡಚಣೆಯಾಗಿದೆ. ಈ ಬಗ್ಗೆ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆ ಸೂಚನೆ ನೀಡಿದ್ದು, ವಾರದೊಳಗೆ ಪರಿಹಾರ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಖಾತೆಗಳಿಗೆ ಜಮೆ ಆದ ಇನ್‌ಪುಟ್ ಸಬ್ಸಿಡಿ ಮತ್ತು ಬೆಳೆ ವಿಮೆ ಪರಿಹಾರ ಮೊತ್ತಗಳನ್ನು ಸಾಲ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಈ ಬಗ್ಗೆ ಲಿಖಿತ ಸೂಚನೆ ಕಳುಹಿಸುವಂತೆ ಸಿಎಸ್‌ಗೆ ಸೂಚನೆ ನೀಡಲಾಗಿದೆ.

ಪರಿಶೀಲನೆ ಕಡ್ಡಾಯ: ಕಾರ್ಯದರ್ಶಿಗಳು ಜಿಲ್ಲೆಗಳಲ್ಲಿ ನಿಯಮಿತವಾಗಿ ಮಾಸಿಕ ಪ್ರಗತಿಪರಿಶೀಲನಾ ಸಭೆ ನಡೆಸಿ, ವರದಿಯನ್ನು ಸಚಿವರಿಗೆ ಸಲ್ಲಿಸಬೇಕು. ಇದರಿಂದ ಸಮಸ್ಯೆಗಳೇನಾದರೂ ಇದ್ದಲ್ಲಿ ಬಗೆಹರಿಸಲು ಸುಲಭವಾಗುತ್ತದೆ ಎಂದ ಅವರು, ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳ ಸಭೆ ನಡೆಸುವುದರ ಜೊತೆಗೆ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಖುದ್ದು ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದರು.

ಸಕಾಲ ಯೋಜನೆಯಡಿ ಕಡತ ವಿಲೇವಾರಿ ತ್ವರಿತವಾಗಿ ಆಗಬೇಕು. ಜೊತೆಗೆ ಇತರ ಕಡತಗಳನ್ನೂ ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬಾಕಿ ಉಳಿಸಬಾರದು ಎಂದ ಯಡಿಯೂರಪ್ಪ, ಎಲ್ಲ ಇಲಾಖೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಸರಕಾರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅರಣ್ಯ-ಕಂದಾಯ ಇಲಾಖೆಗಳೊಂದಿಗೆ ಸಭೆ ನಡೆಸಿ ಇದಕ್ಕಿರುವ ತೊಡಕುಗಳನ್ನು ನಿವಾರಿಸಬೇಕು ಎಂದು ಸಿಎಸ್‌ಗೆ ಯಡಿಯೂರಪ್ಪ ನಿರ್ದೇಶನ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳು ವಿಫಲವಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಗತಿಯ ಕುರಿತು ಅಧ್ಯಯನ ವರದಿ ಹಾಗೂ ಸಲಹೆಗಳನ್ನು ಪಡೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ವಸತಿ ಯೋಜನೆಯಡಿ ವರ್ಷಾಂತ್ಯದಲ್ಲಿ 1.5 ಲಕ್ಷ ಮನೆ ನಿರ್ಮಾಣ ಆಗಿದ್ದು, ಈ ವರೆಗೆ 1.09ಲಕ್ಷ ಮನೆ ನಿರ್ಮಾಣವಾಗಿದೆ. ಪ್ರಗತಿಯಲ್ಲಿರುವ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಅವರು ಇದೇ ವೇಳೆ ಸೂಚಿಸಿದರು.

ಪರಿಶಿಷ್ಟರ ಕಲ್ಯಾಣಕ್ಕೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ 30,444 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈ ವರೆಗೆ 11,642ಕೋಟಿ ರೂ.ಬಿಡುಗಡೆಯಾಗಿದ್ದು, 9,667ಕೋಟಿ ರೂ.ವೆಚ್ಚವಾಗಿದೆ. 2020ರ ಮಾರ್ಚ್ 15ರೊಳಗೆ ಅನುದಾನ ವೆಚ್ಚ ಮಾಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ವೆಚ್ಚ ಮತ್ತು ವಿದ್ಯಾರ್ಥಿ ವೇತನಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ಕಾರ್ಮಿಕರ ಪಿಂಚಣಿ ಯೋಜನೆಯಡಿ ಕೇಂದ್ರ ಸರಕಾರವು 7 ಲಕ್ಷ ಗುರಿ ನೀಡಿತ್ತು. ರಾಜ್ಯದ 8 ಲಕ್ಷ ಕಾರ್ಮಿಕರಿಗೆ ಪಿಂಚಣಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಚ್ಚಿನ ನೆರವು ನೀಡಬೇಕು ಎಂದು ಅವರು ತಿಳಿಸಿದರು.

ನಗರದ ಅಭಿವೃದ್ಧಿಗೆ ಆದ್ಯತೆ: ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು. ನಗರದ ಕೆರೆಗಳ ಬಗ್ಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ನಗರದ ಕಸ ಸಮಸ್ಯೆ ಹೆಚ್ಚಾಗಿದ್ದು, ಕಸ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು

‘ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಸಂಚರಿಸುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಜೆ-ರಾತ್ರಿ ವೇಳೆ ಪೋಲೀಸ್ ಗಸ್ತು ಹೆಚ್ಚಿಸಬೇಕು. ರಾತ್ರಿ ವೇಳೆ ಮಹಿಳಾ ಪೊಲೀಸರು ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು’

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News