ಪೌರತ್ವ ಕಾಯ್ದೆಯಲ್ಲಿ ಮೂಲಭೂತ ತಾರತಮ್ಯ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಕಳವಳ

Update: 2019-12-19 06:14 GMT

ನ್ಯೂಯಾರ್ಕ್, ಡಿ. 13: ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯ ಕಚೇರಿಯು ಕಳವಳ ವ್ಯಕ್ತಪಡಿಸಿದೆ. ಈ ಕಾಯ್ದೆಯು ಮೂಲಭೂತವಾಗಿ ತಾರತಮ್ಯದಿಂದ ಕೂಡಿದೆ ಎಂದು ಅದು ಹೇಳಿದೆ.

‘‘ನೂತನ ಪೌರತ್ವ (ತಿದ್ದುಪಡಿ) ಮಸೂದೆಯು ಮೂಲಭೂತವಾಗಿ ತಾರತಮ್ಯಕಾರಿಯಾಗಿದೆ ಎಂಬ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಹಿಂಸೆಗೆ ಗುರಿಯಾದ ಗುಂಪುಗಳನ್ನು ರಕ್ಷಿಸುವ ಉದ್ದೇಶ ಸ್ವಾಗತಾರ್ಹ, ಆದರೆ ನೂತನ ಕಾನೂನು ಮುಸ್ಲಿಮರಿಗೆ ರಕ್ಷಣೆ ನೀಡುವುದಿಲ್ಲ’’ ಎಂದು ಮಾನವಹಕ್ಕುಗಳ ಸಮಿತಿಯು ಶುಕ್ರವಾರ ಟ್ವೀಟ್ ಮಾಡಿದೆ.

 ‘‘ಭಾರತದ ಸಂವಿಧಾನದಲ್ಲಿ ಅಡಕವಾಗಿರುವ, ‘ಕಾನೂನಿನ ಎದುರು ಎಲ್ಲರೂ ಸಮಾನರು’ ಎಂಬ ಆಶಯವನ್ನು ನೂತನ ಕಾನೂನು ಉಲ್ಲಂಘಿಸಿದಂತೆ ಕಂಡುಬರುತ್ತದೆ. ಅದೂ ಅಲ್ಲದೆ, ಅಂತರ್‌ರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಡಂಬಡಿಕೆ ಹಾಗೂ ಜನಾಂಗೀಯ ತಾರತಮ್ಯ ನಿವಾರಣೆ ಒಪ್ಪಂದಗಳಡಿಯ ತನ್ನ ಬದ್ಧತೆಗಳನ್ನೂ ಭಾರತ ಉಲ್ಲಂಘಿಸಿದಂತೆ ಕಂಡುಬರುತ್ತದೆ. ಈ ಎರಡು ಒಪ್ಪಂದಗಳು ಜನಾಂಗ, ಬುಡಕಟ್ಟು ಮತ್ತು ಧಾರ್ಮಿಕ ಆಧಾರಗಳಲ್ಲಿ ಜನರ ನಡುವೆ ತಾರತಮ್ಯ ಸೃಷ್ಟಿಸುವುದನ್ನು ನಿಷೇಧಿಸುತ್ತವೆ. ಈ ಎರಡೂ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ. ವಿದೇಶೀಯರಿಗೆ ಪೌರತ್ವ ನೀಡುವ ಕಾನೂನುಗಳು ಈಗಾಗಲೇ ಭಾರತದಲ್ಲಿ ಅನುಷ್ಠಾನದಲ್ಲಿವೆಯಾದರೂ, ಈ ತಿದ್ದುಪಡಿಗಳು ರಾಷ್ಟ್ರೀಯತೆ ಬಯಸುವ ಜನರ ನಡುವೆ ತಾರತಮ್ಯ ಮಾಡುತ್ತವೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

2014 ಡಿಸೆಂಬರ್ 31ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತ ಪ್ರವೇಶಿಸಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಕ್ರೈಸ್ತರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವ ನೀಡಲು ಈ ಕಾಯಿದೆಯು ಅವಕಾಶ ನೀಡುತ್ತದೆ. ಆದರೆ, ಮುಸ್ಲಿಮರನ್ನು ಅದು ಪೌರತ್ವ ವ್ಯಾಪ್ತಿಯಿಂದ ಹೊರಗಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News