ಕನ್ನಡ ಭಾಷಾ ಕಲಿಕಾ ಅಧಿನಿಯಮ ಅನುಷ್ಠಾನಕ್ಕೆ ಮುಂದಾಗಿ: ಟಿ.ಎಸ್.ನಾಗಾಭರಣ

Update: 2019-12-13 18:36 GMT

ಬೆಂಗಳೂರು, ಡಿ.13: ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಾಥಮಿಕ ಹಂತದಿಂದಲೇ ಕಲಿಯುವಂತಾಗಬೇಕು ಎನ್ನುವ ಉದ್ದೇಶದಿಂದ ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಜಾರಿಗೆ ತಂದಿದೆ. ಈ ಅಧಿನಿಯಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಥವಾಗಿ ಮನನ ಮಾಡಿಕೊಂಡು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಶುಕ್ರವಾರ ನಗರದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ (ನೊಡೆಲ್ ಅಧಿಕಾರಿಗಳ) ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದೇ ಕನ್ನಡ ಭಾಷಾ ಅನುಷ್ಠಾನಕ್ಕೆ ಮಾರಕವಾಗಿದೆ. ಬಹಳಷ್ಟು ಅಧಿಕಾರಿಗಳು ಅಧಿನಿಯಮವನ್ನು ಓದಿ ಅರ್ಥ ಮಾಡಿಕೊಳ್ಳದಿರುವುದು ಕಂಡುಬಂದಿದೆ ಎಂದು ಹೇಳಿದರು.

2015 ರಲ್ಲಿಯೇ ಕನ್ನಡ ಕಲಿಕಾ ಅಧಿನಿಯಮ ಜಾರಿಗೆ ಬಂದಿದ್ದರೂ ಕಡ್ಡಾಯವಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ವಿಫಲತೆ ಕಂಡುಬಂದಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸತಕ್ಕದ್ದು. ಹಾಗೆಯೇ 2018-19ನೇ ಶೈಕ್ಷಣಿಕ ವರ್ಷದಲ್ಲಿ ಒಂದು ಮತ್ತು ಎರಡನೇ ತರಗತಿಗಳಲ್ಲಿ ಹಾಗೂ 10ನೇ ತರಗತಿಯವರೆಗೆ ಕನ್ನಡ ಭಾಷಾ ಕಲಿಕೆಯನ್ನು ಹಂತ ಹಂತವಾಗಿ ವಿಸ್ತರಿಸತಕ್ಕದ್ದು ಎನ್ನುವ ನಿಯಮವನ್ನು ಅಧಿಕಾರಿಗಳು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದರು.

ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಾಗಿರುವ ಜವಾಬ್ದಾರಿ ಶಿಕ್ಷಣ ಇಲಾಖಾ ಅಧಿಕಾರಿಗಳ ಮೇಲಿದೆ. ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸದ ಶಾಲೆಗಳನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರಕ್ಕೆ ವಸ್ತುನಿಷ್ಠ ವರದಿ ಮಾಡಬೇಕು. ವರದಿಯನ್ನು ಆಧರಿಸಿ ಶಿಕ್ಷಣ ಸಂಸ್ಥೆಗಳ ಮೇಲೆ ದಂಡ ವಿಧಿಸುವ ಅಥವಾ ಅನುಮತಿ ನೀಡುವುದನ್ನು ರದ್ದುಗೊಳಿಸುವ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸೂಚಿಸಿದರು.

ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹೊಣೆಗಾರಿಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲಿರುತ್ತದೆ. ಕಾನೂನನ್ನು ಅನುಷ್ಠಾನಗೊಳಿಸುವ ಗುರುತರ ಹೊಣೆಗಾರಿಕೆ ಕ್ಷೇತ್ರ ವಲಯದ ಅಧಿಕಾರಿಗಳ ಮೇಲೆ ಇರುತ್ತದೆ ಎಂದು ಅವರು ನುಡಿದರು.

ಈ ವೇಳೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾದೇಗೌಡ, ಸರ್ವ ಶಿಕ್ಷ ಅಭಿಯಾನದ ನಿರ್ದೇಶಕರಾದ ಎಚ್.ಎನ್. ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News