​'ಪ್ರೇಮ ಸೇತುವೆ'ಯಾದ ಕರ್ತಾರ್‌ಪುರ ಕಾರಿಡಾರ್!

Update: 2019-12-14 04:05 GMT

ಕರ್ತಾರ್‌ಪುರ, ಡಿ.14: ಗಡಿಯಿಂದಾಗಿ ಬೇರ್ಪಟ್ಟ ಪ್ರೇಮಿಗಳಿಗೆ ಮತ್ತೊಮ್ಮೆ ಕರ್ತಾರ್‌ಪುರ ಕಾರಿಡಾರ್ ಪ್ರೇಮಸೇತುವೆಯಾಗಿ ಪರಿಣಮಿಸಿದೆ. ಪಂಜಾಬ್‌ನ ಸಿಕ್ಖ್ ಯುವಕನೊಬ್ಬ ಪಾಕಿಸ್ತಾನದಲ್ಲಿರುವ ದರ್ಬಾರ್‌ಸಾಹಿಬ್ ಗುರುದ್ವಾರಕ್ಕೆ ಬಂದದ್ದು, ಆನ್‌ಲೈನ್ ಮೂಲಕ ಪರಿಚಯವಾದ ಪಾಕಿಸ್ತಾನಿ ಪ್ರೇಯಸಿಯನ್ನು ಭೇಟಿ ಮಾಡುವ ಸಲುವಾಗಿ.

ಜಿತೇಂದ್ರ ಸಿಂಗ್ ಅಮೃತಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಾನೆ. ಈತನ ಪ್ರೇಯಸಿ ಲಾಹೋರ್‌ನ ಪಂಜಾಬ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ. ಸಾಮಾನ್ಯವಾಗಿ ಯಾತ್ರಿಗಳಿಗೆ ಪರಿಚಿತವಲ್ಲದ ಗುರುದ್ವಾರ ಆವರಣದಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಪಾಕಿಸ್ತಾನಿ ರೇಂಜರ್ ಪತ್ತೆ ಮಾಡಿದೆ.

ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಿದಾಗ, ತಾವಿಬ್ಬರೂ ಪರಸ್ಪರ ವಿವಾಹವಾಗಲು ಬಯಸಿದ್ದು, ಪರಸ್ಪರ ಸಂಧಿಸಲು ಕಾರಿಡಾರ್ ಉತ್ತಮ ವಿಧಾನ ಎಂಬ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.

ಸಿಂಗ್ ಅವರನ್ನು ತಕ್ಷಣ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಮುಸ್ಲಿಂ ಯುವತಿ 200 ರೂಪಾಯಿ ಪಾವತಿಸಿ ಗುರುದ್ವಾರಕ್ಕೆ ಬಂದಿದ್ದಳು. ಪಾಕಿಸ್ತಾನಿ ಮುಸ್ಲಿಮರು ಈ ಪವಿತ್ರ ಮಂದಿರಕ್ಕೆ ಭೇಟಿ ಮಾಡಬೇಕಿದ್ದರೆ 200 ರೂಪಾಯಿ ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ.

ಪಾಕಿಸ್ತಾನಿ ವೀಸಾ ಪಡೆದು ಅತ್ತಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ಬಂದು ಯುವತಿಯನ್ನು ಭೇಟಿಯಾಗಿ ವಿವಾಹವಾಗುವುದಾಗಿ ಯುವಕ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಪಾಕಿಸ್ತಾನಿ ಅಧಿಕಾರಿಗಳು ಯಾವುದೇ ಕಿರುಕುಳ ನೀಡಿಲ್ಲ ಎಂದು ಈತ ಸ್ಪಷ್ಟಪಡಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಎರಡು ತಿಂಗಳ ಹಿಂದೆ ಯುವತಿಯ ಪರಿಚಯವಾಗಿತ್ತು ಎಂದು ಹೇಳಿದ್ದಾನೆ.

ಹದಿನೆಂಟು ದಿನಗಳ ಮೊದಲು ಹರ್ಯಾಣದ ರೋಹ್ಟಕ್ ನಿವಾಸಿ ಮಂಜೀತ್ ಕೌರ್, ತಮ್ಮ ಪ್ರಿಯಕರ ಅವಾಯಿಸ್ ಮುಕ್ತರ್ ಎಂಬುವವರನ್ನು ಭೇಟಿ ಮಾಡಲು ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು. ಪಾಕಿಸ್ತಾನಿ ಅಧಿಕಾರಿಗಳು ಯುವತಿಯನ್ನು ವಾಪಾಸು ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News