45 ವರ್ಷಗಳಲ್ಲಿ ಗರಿಷ್ಟ ನಿರುದ್ಯೋಗ ಸೃಷ್ಟಿಸಲು ಮೋದಿ ಸರಕಾರದಿಂದ ಸಾಧ್ಯ: ಪ್ರಿಯಾಂಕಾ ವ್ಯಂಗ್ಯ

Update: 2019-12-14 08:19 GMT

 ಹೊಸದಿಲ್ಲಿ, ಡಿ.14: "ಕೆಲವು ವರ್ಷಗಳ ಹಿಂದೆ ನಮ್ಮ ದೇಶದ ಆರ್ಥಿಕ ಬೆಳವಣಿಗೆ ದರ ಇಡೀ ವಿಶ್ವ ನಮ್ಮತ್ತ ತಿರುಗಿ ನೋಡುವ ಹಾಗೆ ಇತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ಮೋದಿ ಸರಕಾರ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ದುಸ್ಥಿತಿಗೆ ತಲುಪಿಸಿದೆ. ಜನರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ, ಕಾರ್ಖಾನೆಗಳು ಬಾಗಿಲು ಮುಚ್ಚುತ್ತಲಿವೆ. ‘ಮೋದಿ ಹೈ ತೋ, ಅನ್‌ಎಂಪ್ಲಾಯ್‌ಮೆಂಟ್ ಹೈ’ ಎಂಬ ಸ್ಥಿತಿ ತಲುಪಿದೆ'' ಎಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 'ಭಾರತ್ ಬಚಾವೋ' ಮೆಗಾ ರ‌್ಯಾಲಿಯನ್ನು ಉದ್ದೇಶಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

"ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಬಿಜೆಪಿ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ತಲುಪಿದೆ. ಬಿಜೆಪಿ ಸರಕಾರದಲ್ಲಿ 45 ವರ್ಷಗಳಲ್ಲಿ ಗರಿಷ್ಟ ನಿರುದ್ಯೋಗ ಸೃಷ್ಟಿಸಲು ಸಾಧ್ಯವಿದೆ. 4 ಕೋಟಿ ಉದ್ಯೋಗ ನಾಶಪಡಿಸಲು ಸಾಧ್ಯವಿದೆ. ಮೋದಿ ಸರಕಾರದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎನ್ನುವುದಕ್ಕೆ ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ತೆ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿರುವುದೇ ಸಾಕ್ಷಿಯಾಗಿದೆ. ಈ ದೇಶದ ಪ್ರತಿ ಪ್ರಜೆಯೂ ಧ್ವನಿ ಎತ್ತಬೇಕು. ನೀವು ಈ ದೇಶವನ್ನು ಇಷ್ಟಪಡುತ್ತೀರಿ ಎಂದಾದರೆ ದೇಶದ ಪರವಾಗಿ ಧ್ವನಿ ಎತ್ತಿ. ಇಂತಹ ಪರಿಸ್ಥಿತಿಯಲ್ಲೂ ಧ್ವನಿ ಎತ್ತದಿದ್ದರೆ ಭಯ ಹಾಗೂ ಸುಳ್ಳಿನ ಕತ್ತಲೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ನೀವು ಸುಮ್ಮನಿದ್ದರೆ ನಮ್ಮ ಸಂವಿಧಾನ ನಾಶವಾಗಬಹುದು'' ಎಂದು ಪ್ರಿಯಾಂಕಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News