ಭರತನಾಟ್ಯ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಲೀಲಾ ಸ್ಯಾಮ್ಸನ್ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

Update: 2019-12-14 11:59 GMT

ಹೊಸದಿಲ್ಲಿ: ಚೆನ್ನೈನ ಕಲಾಕ್ಷೇತ್ರ ಫೌಂಡೇಶನ್‍ ನ ಕೂತಂಬಲಂ ಸಭಾಂಗಣ ನವೀಕರಣ ಯೋಜನೆಗೆ ಮೀಸಲಾಗಿದ್ದ 7.02 ಕೋಟಿ ರೂ. ಬಳಸಿ 'ಅನುತ್ಪಾದಕ ವೆಚ್ಚ' ಮಾಡಿದ ಆರೋಪದ ಮೇಲೆ ಖ್ಯಾತ ಭರತನಾಟ್ಯಂ ಪಟು ಹಾಗೂ ಸಂಗೀತ ನಾಟಕ ಅಕಾಡಮಿಯ ಮಾಜಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿಯ ಮಾಜಿ ಅಧ್ಯಕ್ಷೆಯೂ ಆಗಿರುವ ಲೀಲಾ ಸ್ಯಾಮ್ಸನ್ ಹೊರತಾಗಿ ಫೌಂಡೇಶನ್‍ನ ಮಾಜಿ ಮುಖ್ಯ ಲೆಕ್ಕಾಧಿಕಾರಿ ಟಿ ಎಸ್ ಮೂರ್ತಿ, ಲೆಕ್ಕಾಧಿಕಾರಿ ಎಸ್ ರಾಮಚಂದ್ರನ್, ಇಂಜಿನಿಯರಿಂಗ್ ಅಧಿಕಾರಿ ವಿ ಶ್ರೀನಿವಾಸನ್, ಕಾರ್ಡ್ ಹಾಗೂ ಚೆನ್ನೈ ಇಂಜನಿಯರ್ಸ್  ಮಾಲಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿ ಕನ್ಸಲ್ಟೆಂಟ್ ಆರ್ಕಿಟೆಕ್ಟ್ ಸಂಸ್ಥೆ ಕಾರ್ಡ್‍ಗೆ ನವೀಕರಣ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು ಎಂದು ಸಿಬಿಐಗೆ ನೀಡಿದ್ದ ತನ್ನ ದೂರಿನಲ್ಲಿ ಸಂಸ್ಕೃತಿ ಸಚಿವಾಲಯದ ಮುಖ್ಯ ವಿಜಿಲೆನ್ಸ್ ಅಧಿಕಾರಿ ಆರೋಪಿಸಿದ್ದಾರೆ.

ಈ ರೂ 7.02 ಕೋಟಿ ಯೋಜನೆಯಲ್ಲಿ ಅಂದಾಜು ಮೊತ್ತಕ್ಕಿಂತ ಫೌಂಡೇಶನ್ ರೂ. 62.20 ಕೋಟಿ ಹೆಚ್ಚುವರಿ ಮೊತ್ತ  ವ್ಯಯಿಸಿತ್ತು ಎಂದು 2016ರಲ್ಲಿ ನಡೆಸಿದ ತನಿಖೆಯ ನಂತರ ಸಂಸ್ಕೃತಿ ಸಚಿವಾಲಯ ಆರೋಪಿಸಿತ್ತು. ಲೀಲಾ ಸ್ಯಾಮ್ಸನ್ ಅವರು ಮೇ 6, 2005 ಹಾಗೂ ಎಪ್ರಿಲ್ 30, 2012ರ ನಡುವೆ ಫೌಂಡೇಶನ್ ನಿರ್ದೇಶಕಿಯಾಗಿದ್ದರು. 1985ರಲ್ಲಿ ನಿರ್ಮಿಸಲಾದ ಸಭಾಂಗಣ ನವೀಕರಣಗೊಳಿಸುವ ಅಗತ್ಯವಿದೆಯೆಂದು 2006ರಲ್ಲಿ ಅಭಿಪ್ರಾಯ ಪಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News