ಮೀನುಗಾರ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಮನವಿ: ಸಿಎಂ ಯಡಿಯೂರಪ್ಪ

Update: 2019-12-14 17:35 GMT

ಬೆಂಗಳೂರು, ಡಿ.14: ಬೆಸ್ತರು, ಮೊಗವೀರರು, ಅಂಬಿಗರು ಸೇರಿದಂತೆ ಸುಮಾರು 39 ಪರ್ಯಾಯ ಪದಗಳಿಂದ ಗುರುತಿಸ್ಪಡುವ ಮೀನುಗಾರರ ಸಮುದಾಯವನ್ನು ಎಸ್ಟಿ(ಪರಿಶಿಷ್ಟ ಪಂಗಡ) ವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಶನಿವಾರ ರಾಷ್ಟ್ರೀಯ ಮೀನುಗಾರರ ಸಂಘ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನಿ ವಿಕಾಸ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಮುಂದಿನ ವಾರದಲ್ಲಿ ದೆಹಲಿಗೆ ಹೋಗಿ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವ ಸಚಿವ ಅರ್ಜುನ್ ಮುಂಡಾರ ಬಳಿ ಮಾತನಾಡಿ, ಎಸ್ಟಿಗೆ ಸೇರಿಸುವಂತೆ ವಿನಂತಿ ಮಾಡುತ್ತೇನೆಂದು ಅವರು ಹೇಳಿದರು.

ರಾಜ್ಯ ಮೀನುಗಾರಿಕೆಯಲ್ಲಿ 9ನೇ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆಯಿಂದ ಹೆಚ್ಚಿನ ಆದಾಯ ಹರಿದುಬರುತ್ತಿದೆ. ಆದರೂ ಮೀನುಗಾರರ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಮೀನುಗಾರರ ಸಮುದಾಯ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿದೆ. ಇದನ್ನು ಗಮನದಲ್ಲಿಟ್ಟು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಸಮುದಾಯದ ಪರವಾಗಿ ಕೆಲಸ ಮಾಡುವುದು ಕರ್ತವ್ಯವಾಗಿದೆ. ಸೌಲಭ್ಯಗಳನ್ನು ಕೇಳುವುದು ಸಮುದಾಯದ ಪ್ರತಿಯೊಬ್ಬರ ಹಕ್ಕು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಮೀನುಗಾರ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಿದ ಮಾತ್ರಕ್ಕೆ ನಾವು ಬ್ರಾಹ್ಮಣರು, ಲಿಂಗಾಯತರ ರೀತಿ ಆಗುವುದಿಲ್ಲ. ಹೀಗಾಗಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಂತ ಶ್ರಮ, ಶ್ರದ್ಧೆಯಿಂದ ವಿವಿಧ ಕ್ಷೇತ್ರಗಳಲ್ಲಿ ಮೇಲಕ್ಕೆ ಬರಬೇಕೆಂದು ತಿಳಿಸಿದರು.

ನಟಿ ಭಾವನಾ ಮಾತನಾಡಿ, ಮೀನುಗಾರರ ಸಮುದಾಯ ಧೈರ್ಯಕ್ಕೆ, ತ್ಯಾಗ ಹಾಗೂ ನಂಬಿಕೆಗೆ ಹೆಸರಾದವರು. ರಾಣಿ ಅಬ್ಬಕ್ಕನ ಜೊತೆ ಸೇರಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಇತಿಹಾಸವನ್ನು ಹೊಂದಿದೆ. ಇಂತಹ ಭವ್ಯ ಪರಂಪರೆಯನ್ನು ಹೊಂದಿರುವ ಮೀನುಗಾರರ ಇವತ್ತಿನ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೀನುಗಾರರ ಸಮುದಾಯ ಶೇ.10ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಇದನ್ನು ಎಲ್ಲ ಜನಪ್ರತಿನಿಧಿಗಳು ಗಮನದಲ್ಲಿಟ್ಟುಕೊಂಡು ಸಮುದಾಯದ ಪರವಾಗಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಕೆರೆ, ಸರೋವರ, ಅಣೆಕಟ್ಟುಗಳಲ್ಲಿ ಮೀನು ಹಿಡಿಯುವ ಶೇ.90ರಷ್ಟು ಹಕ್ಕನ್ನು ಮೀನುಗಾರರ ಸಮುದಾಯಕ್ಕೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಮೊಮ್ಮಾಯಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್‌ ಗರುಡಾಚಾರ್, ಮೀನುಗಾರ ಸಮುದಾಯದ ಡಾ.ಎಂ.ಪಿ. ಪೂರ್ಣಾನಂದ, ಶಾಸಕ ಲಾಲಾಜಿ ಆರ್.ಮೆಂಡಲ್, ಡಾ.ದೇವಿಪ್ರಸಾದ್ ಹೆಜಮಾಡಿ, ಬಿ.ಡಿ.ರವಿಕುಮಾರ್ ಮತ್ತಿತರರಿದ್ದರು.

ಹಕ್ಕೊತ್ತಾಯಗಳು

-ಮೀನುಗಾರರ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಒತ್ತಾಯ ಮಾಡಬೇಕು.

-ಕೆರೆ, ಸರೋವರ, ಅಣೆಕಟ್ಟುಗಳಲ್ಲಿ ಶೇ.90ರಷ್ಟು ಮೀನುಗಾರಿಕೆಯಲ್ಲಿ ಮೀನುಗಾರ ಸಮುದಾಯಕ್ಕೆ ಮೀಸಲಿಡಬೇಕು.

-ಶಾಸಕ ಲಾಲಾಜಿ ಆರ್.ಮೆಂಡಲ್‌ಗೆ ಹಾಗೂ ಪರಿಷತ್ ಸದಸ್ಯ ಎನ್.ರವಿಕುಮಾರ್‌ಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು.

-ನಿಜಗುಣ ಅಂಬಿಗರ ಚೌಡಯ್ಯ ನಿಗಮಕ್ಕೆ 100ಕೋಟಿ ರೂ.ಮೀಸಲಿಡಬೇಕು.

-ರಾಜ್ಯ ಗಂಗಾಮತಸ್ಥರ ಸಂಘದ ವಿದ್ಯಾರ್ಥಿನಿಲಯ ಮತ್ತು ಗಂಗಾಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರಕ್ಕೆ 25ಕೋಟಿ ರೂ.ಬಿಡುಗಡೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News