ಪೌರತ್ವ ತಿದ್ದುಪಡಿ ಕಾನೂನಿಗೆ ವಿರೋಧ: ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಂದ ಮೌನ ಪ್ರತಿಭಟನೆ

Update: 2019-12-19 06:35 GMT

ಬೆಂಗಳೂರು, ಡಿ.14: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಶನಿವಾರ ನಗರದ ಪುರಭವನದ ಎದುರು ನನ್ನ ಜಾತಿ ಅಸ್ಸಾಮಿ-ನನ್ನ ಅಸ್ಮಿತೆ ಅಸ್ಸಾಮಿ, ಸಿಎಬಿಗೆ ನಮ್ಮ ವಿರೋಧ, ನಾವು ಸಿಎಬಿಯನ್ನು ವಿರೋಧಿಸುತ್ತೇವೆ, ದೇಶದ ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಮೌನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ‘ವಾರ್ತಾಭಾರತಿ’ ಪ್ರತಿನಿಧಿ ಜೊತೆ ಮಾತನಾಡಿದ ಅಸ್ಸಾಮಿನ ವಿದ್ಯಾರ್ಥಿ ಇರತ್, ಈಶಾನ್ಯ ರಾಜ್ಯಗಳಲ್ಲಿ ಜನಸಂಖ್ಯೆ ತುಂಬಾ ಕಡಿಮೆ. ಈಗಾಗಲೇ 1.9 ದಶಲಕ್ಷ ಬಾಂಗ್ಲಾದೇಶಿಗಳು ಅಲ್ಲಿದ್ದಾರೆ ಎಂದು ಎನ್‌ಆರ್‌ಸಿಯ ಅಂಕಿ ಅಂಶಗಳೇ ಹೇಳಿವೆ. ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಇನ್ನೂ ಹೆಚ್ಚಿನ ಮಂದಿ ಅಲ್ಲಿ ವಲಸೆ ಬರುವ ಸಾಧ್ಯತೆಯಿದೆ ಎಂದರು.

1979-85ರವರೆಗೆ ನಡೆದ ಅಸ್ಸಾಂ ಆಂದೋಲನದಲ್ಲಿ 850 ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಆನಂತರವೇ ಅಸ್ಸಾಂ ಒಪ್ಪಂದ ಏರ್ಪಟ್ಟಿತ್ತು. ಆದರೆ, ಈಗ ಪೌರತ್ವ ತಿದ್ದುಪಡಿ ಕಾನೂನಿನ ಮೂಲಕ ಕೇಂದ್ರ ಸರಕಾರ ಅಸ್ಸಾಂ ಒಪ್ಪಂದಕ್ಕೆ ತೀಲಾಂಜಲಿ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಶಾನ್ಯ ರಾಜ್ಯಗಳಲ್ಲಿ 230 ಬುಡಕಟ್ಟು ಜನಾಂಗಗಳಿದ್ದು, ಪ್ರತಿಯೊಂದು ಬುಡಕಟ್ಟು ತನ್ನದೇ ಆದ ಸಂಸ್ಕೃತಿ, ಭಾಷೆಯನ್ನು ಹೊಂದಿದೆ. ಇಲ್ಲಿ ಹೊರಗಿನವರಿಗೆ ಅವಕಾಶ ಕಲ್ಪಿಸಿಕೊಟ್ಟರೆ ನಾವು ನಮ್ಮ ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಇರತ್ ಆತಂಕ ವ್ಯಕ್ತಪಡಿಸಿದರು.

ಒಂದು ವೇಳೆ ಶ್ರೀಲಂಕಾದಲ್ಲಿರುವ ತಮಿಳರನ್ನು ತಂದು ಕರ್ನಾಟಕದಲ್ಲಿ ಇರಲು ಅವಕಾಶ ಕೊಟ್ಟರೆ, ಇಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಾರೆ. ಆಗ ಇಲ್ಲಿ ತಮಿಳು ಭಾಷೆಯ ಪ್ರಾಬಲ್ಯ ಹೆಚ್ಚಾಗಿ ಕನ್ನಡಿಗರೂ ತಮಿಳು ಮಾತನಾಡುವಂತೆ ಒತ್ತಾಯ ಹೇರಿದರೆ ಸಹಿಸಲು ಸಾಧ್ಯವೇ? ಅದೇ ರೀತಿ ನಾವು ನಮ್ಮ ಮೇಲೆ ಬಾಂಗ್ಲಾದೇಶಿಯರು ಬಂದು ದಬ್ಬಾಳಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ವಿದ್ಯಾರ್ಥಿನಿ ಸಂಜವಿತಾ ಮಾತನಾಡಿ, ಬಲವಂತದ ಮೂಲಕ ಪೌರತ್ವ ತಿದ್ದುಪಡಿ ಕಾನೂನು ನಮ್ಮ ಮೇಲೆ ಯಾಕೆ ಹೇರಲಾಗುತ್ತಿದೆ. ನಮ್ಮ ನೆಲದಲ್ಲಿ ನಾವು ಅಲ್ಪಸಂಖ್ಯಾತರಾಗಿ ಬದುಕಬೇಕೆ? ನಮ್ಮ ಗುರುತು, ನಮ್ಮ ಅಸ್ಮಿತೆಯನ್ನು ನಾವು ಕಳೆದುಕೊಳ್ಳಬೇಕೆ? ಕೇಂದ್ರ ಸರಕಾರ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ, ಕಿರುಕುಳ ನೀಡುತ್ತಿದೆ. ಈಗ ನಮ್ಮ ಜನ ಬೀದಿಯಲ್ಲಿ ಸಾಯುತ್ತಿದ್ದಾರೆ. ನಾವು ನಮ್ಮ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ವಿದ್ಯಾರ್ಥಿನಿ ಡಿಂಪಿ ಸಿಕ್ಕಾ ಮಾತನಾಡಿ, ಅಸ್ಸಾಂನಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ದೂರವಾಣಿ ಸಂಪರ್ಕವನ್ನು ಯಾವಾಗ ಕಡಿತ ಮಾಡುತ್ತಾರೋ ಗೊತ್ತಿಲ್ಲ. ಮನೆಗೆ ಕರೆ ಮಾಡಿದಾಗ ಯಾರಾದರೂ ಸ್ವೀಕರಿಸದಿದ್ದರೆ ಅವರು ಬದುಕಿದ್ದಾರೋ, ಸತ್ತಿದ್ದಾರೋ ಎಂಬ ಆತಂಕ ಮನೆ ಮಾಡುವಂತಹ ಪರಿಸ್ಥಿತಿಯನ್ನು ಈ ಕೇಂದ್ರ ಸರಕಾರ ನಿರ್ಮಾಣ ಮಾಡಿದೆ ಎಂದು ಕಿಡಿಕಾರಿದರು.

ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೈ ಜೋಡಿಸದಂತೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ನುಗ್ಗಿ ಜನಸಾಮಾನ್ಯರಂತೆ ಉಡುಪು ಧರಿಸಿದ ಸೈನಿಕರು ಥಳಿಸುತ್ತಿದ್ದಾರೆ. ನಾವು ಹಿಂಸಾತ್ಮಕ ಮಾರ್ಗ ಅನುಸರಿಸುತ್ತಿಲ್ಲ. ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಮುಸ್ಲಿಮೇತರ ಬಾಂಗ್ಲಾದೇಶಿಯರಿಗೆ ಪೌರತ್ವ ನೀಡಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಒಬ್ಬ ಬಡವನಿಗೆ ತಿನ್ನಲು ಅನ್ನ ಇಲ್ಲ, ಆತನು ದಾಖಲಾತಿಗಳನ್ನು ಎಲ್ಲಿಂದ ತಂದು ತನ್ನ ಪೌರತ್ವ ಸಾಬೀತುಪಡಿಸಬೇಕು. ಈ ಕಾನೂನು ಜಾರಿಯಾಗುತ್ತಿರುವ ಮಾಹಿತಿ ಹೊರ ಬಂದ ದಿನದಿಂದ ಅಲ್ಲಿ ಮತಾಂತರ ಪ್ರಕ್ರಿಯೆಗಳು ಹೆಚ್ಚಾಗಿವೆ ಎಂದು ಡಿಂಪಿ ಆರೋಪಿಸಿದರು.

ನಮ್ಮ ರಾಜ್ಯದಲ್ಲಿರುವ ಸಂಪನ್ಮೂಲಗಳ ಆಧಾರದಲ್ಲಿ ನಾವು ಹೊರಗಿನವರನ್ನು ಅಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಸತ್ಯವನ್ನು ಯಾಕೆ ಸರಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಹಿಂದೂ-ಮುಸ್ಲಿಮ್ ಎಂದು ಧರ್ಮವನ್ನು ಯಾಕೆ ತರಲಾಗುತ್ತಿದೆ. ಈಗ ಆಡಳಿತದಲ್ಲಿರುವ ಸರಕಾರದ ಪರವಾಗಿ ಎಲ್ಲ ಧರ್ಮೀಯರು ಮತ ಹಾಕಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಯಾಕೆ ವಿಭಜನೆ ಎಂದು ಅವರು ಪ್ರಶ್ನಿಸಿದರು.

ದೇಶದ ಎಲ್ಲ ನಾಗರಿಕರು ನಮ್ಮ ಈ ಹೋರಾಟವನ್ನು ಬೆಂಬಲಿಸುವಂತೆ ನಾವು ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಡಿಂಪಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News