ಸಿದ್ದರಾಮಯ್ಯರನ್ನು ಭೇಟಿ ಮಾಡಿ ಎಚ್.ವಿಶ್ವನಾಥ್ ನೀಡಿದ 'ಭಾರತ- ಪಾಕ್' ಹೇಳಿಕೆಯಿದು...

Update: 2019-12-14 13:55 GMT

ಬೆಂಗಳೂರು, ಡಿ. 14: ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಮಾಜಿ ಸಚಿವ ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ, ನೂತನ ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಖುದ್ದು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಮುಖಂಡರು, ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದ್ದಲ್ಲದೆ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಅಲ್ಲದೆ, ಇದೇ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿದ್ದಾರೆಂದು ಗೊತ್ತಾಗಿದೆ.

ನಾವೇನೂ ವೈರಿಗಳಲ್ಲ: ‘ನಾನು ಮತ್ತು ಸಿದ್ದರಾಮಯ್ಯ ಪರಸ್ಪರ ವೈರಿಗಳಲ್ಲ. ಶತ್ರುತ್ವ ಎಂದರೆ ಭಾರತ ಮತ್ತು ಪಾಕಿಸ್ತಾನದ್ದು. ನಾನು ಮತ್ತು ಸಿದ್ದರಾಮಯ್ಯ ಇಂಡಿಯಾ ಪಾಕಿಸ್ತಾನವೇನಲ್ಲ. ಮತ ರಾಜಕೀಯ ಬೇರೆ ಸ್ನೇಹ ಬೇರೆ’ ಎಂದು ವಿಶ್ವನಾಥ್ ಸ್ಪಷ್ಟನೆ ನೀಡಿದರು.

‘ನನ್ನ ಹಾಗೂ ಸಿದ್ದರಾಮಯ್ಯನವರನ್ನು ಶತ್ರುಗಳೆಂದು ಕರೆಯಬೇಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನನಾಯಕರ ಆರೋಗ್ಯ ಮುಖ್ಯ. ಯಾವುದೇ ಜನನಾಯಕರು ಕುಸ್ತಿ ಮಾಡಲು ಆಗುವುದಿಲ್ಲ. ಆದರಿಂದ ಅವರಿಗೆ ಭದ್ರತೆ ನೀಡುತ್ತೇವೆ’ ಎಂದು ಎಚ್. ವಿಶ್ವನಾಥ್ ಹೇಳಿದರು

ರಾಜ್ಯದಲ್ಲಿ ಯಾರೂ ಪಕ್ಷಾಂತರ ಮಾಡೇ ಇಲ್ಲವೇ? ನಾವು ಬೆನ್ನಿಗೆ ಚೂರಿ ಹಾಕಿದ್ದೇವೆಂದು ಮಾಧ್ಯಮಗಳು ಬಿಂಬಿಸುತ್ತಿವೆ. ಇದು ತಪ್ಪು. ಮತ ಭೇದ, ಯೋಚನಾಲಹರಿ ಬದಲಾವಣೆ ಇರಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ವೈರಿಗಳಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಬಿಎಸ್‌ವೈ ಅವರ ಮೇಲೆ ಪ್ರೀತಿ ಇದೆ ಎಂದರು.

ಸೋಲು-ಗೆಲುವು ಸಾಮಾನ್ಯ: ರಾಜಕಾರಣದಲ್ಲಿ ಹಠ ಇಲ್ಲದೆ ಇದ್ದರೆ ರಾಜಕೀಯದಲ್ಲಿ ಏನೂ ಸಿಗುವುದಿಲ್ಲ. ಇಂದಿರಾ ಗಾಂಧಿಯೇ ಸೋತಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ಭಾರತ ಉಸಿರಾಡುವುದು, ಹೊದ್ದು ಮಲಗುವುದು ರಾಜಕೀಯದಲ್ಲಿ. ನನ್ನ ಉಸಿರಿರುವವರೆಗೆ ರಾಜಕೀಯದಲ್ಲೇ ಇರುತ್ತೇನೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

‘ನನಗೆ ಸಚಿವ ಸ್ಥಾನ ನೀಡುವುದು ಅಥವಾ ಕೊಡದೆ ಇರುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಟ್ಟದ್ದು’

-ಎಚ್.ವಿಶ್ವನಾಥ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News