130 ಕೋಟಿ ಜನರ ನೋವಿನ ಬೆಲೆ ಮೋದಿ ಮುಂದಿನ ಚುನಾವಣೆಯಲ್ಲಿ ಎದುರಿಸುತ್ತಾರೆ: ರಿಝ್ವಾನ್ ಅರ್ಷದ್

Update: 2019-12-19 06:34 GMT

ಬೆಂಗಳೂರು, ಡಿ.14: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾನೂನು(ಸಿಎಬಿ) ಮೂಲಕ ಭಾರತೀಯರನ್ನು ನಿರಾಶ್ರಿತರನ್ನಾಗಿಸಿ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ ಎಂದು ಶಾಸಕ ರಿಝ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಆರ್‌ಸಿ ಹಾಗೂ ಸಿಎಬಿ ಮೂಲಕ ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಲಾಗಿದೆ. ಸ್ವಾತಂತ್ರ ಬಂದು 70 ವರ್ಷಗಳ ನಂತರ ಬಿಜೆಪಿ ಸರಕಾರಕ್ಕೆ ಏಕಾಏಕಿ ಪೌರತ್ವ ತಿದ್ದುಪಡಿ ಕಾನೂನು ಜಾರಿ ಮಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಇವತ್ತು ಈಶಾನ್ಯ ರಾಜ್ಯಗಳು ಹೊತ್ತು ಉರಿಯುತ್ತಿವೆ. ದೇಶದ ಮುಸ್ಲಿಮರು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಮುಸ್ಲಿಮರಿಗೆ 50 ರಾಷ್ಟ್ರಗಳಿವೆ, ಹಿಂದೂಗಳಿಗೆ ಭಾರತ ಬಿಟ್ಟು ಬೇರೆ ಯಾವ ದೇಶವಿದೆ ಎಂದು ಪ್ರಶ್ನಿಸಲಾಗುತ್ತಿದೆ. ಸೌದಿ ಅರೇಬಿಯಾ ಹಾಗೂ ವ್ಯಾಟಿಕನ್ ಸಿಟಿ ಸೇರಿದಂತೆ ವಿಶ್ವದ ಯಾವುದಾದರೂ ದೇಶ ಹಿಂದೂಗಳಿಗೆ ಪೌರತ್ವ ನೀಡಲು ನಿರಾಕರಿಸಿದೆಯೇ? ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿನ ಜ್ವಲಂತ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಈ ಕೆಲಸ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ಕಾನೂನಾಗಿದೆ. ಶ್ರೀಲಂಕಾದಲ್ಲಿ ಸಮಸ್ಯೆ ಎದುರಿಸುತ್ತಿರುವ ತಮಿಳರನ್ನು ಯಾಕೆ ಸಿಎಬಿಯಲ್ಲಿ ಕೈ ಬಿಡಲಾಗಿದೆ. 40 ಸಾವಿರ ರೋಹಿಂಗ್ಯಾ ಮುಸ್ಲಿಮರಿಗೆ ಇಲ್ಲಿ ಆಶ್ರಮ ನೀಡಲು ಸಿದ್ಧರಿಲ್ಲ. ಆದರೆ, ಲಕ್ಷಾಂತರ ಹಿಂದೂಗಳಿಗೆ ಪೌರತ್ವ ನೀಡಲು ಮುಂದಾಗಿದ್ದಾರೆ ಎಂದು ಅವರು ದೂರಿದರು.

ಸಮಾಜದಲ್ಲಿ ಅಶಾಂತಿ ಮೂಡಿಸಿ, ವಿಭಜನೆ ಮಾಡಿ, ದೇಶಕ್ಕೆ ಬೆಂಕಿ ಹಚ್ಚುವುದೇ ಗುಜರಾತ್ ಮಾದರಿಯಾಗಿದೆ. ಈಗ 130 ಕೋಟಿ ಜನ ಮತ್ತೆ ಸರತಿ ಸಾಲುಗಳಲ್ಲಿ ನಿಂತು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿದೆ. ಒಂದು ವೇಳೆ ಯಾರಾದರೂ ಭಾರತೀಯ ಹಿಂದೂ ವ್ಯಕ್ತಿ ಎನ್‌ಆರ್‌ಸಿ ಎದುರು ತನ್ನ ಪೌರತ್ವ ಸಾಬೀತುಪಡಿಸಲು ವಿಫಲನಾದರೆ, ಆತನನ್ನು ನಿರಾಶ್ರಿತ, ವಲಸಿಗ ಎಂದು ಪರಿಗಣಿಸಿ, ಆನಂತರ ಪೌರತ್ವ ನೀಡಲಾಗುತ್ತದೆ ಎಂದು ಅವರು ಕಿಡಿಗಾರಿದರು. ಹಿಂದುಳಿದವರು, ತುಳಿತಕ್ಕೊಳಗಾದವರು, ದಲಿತರು, ಆದಿವಾಸಿಗಳು ಎಲ್ಲಿಂದ ದಾಖಲಾತಿಗಳನ್ನು ತರುತ್ತಾರೆ. ಎಲ್ಲಾದರೂ ನೆರೆ ಹಾವಳಿ, ಭೂಕಂಪ ಸಂಭವಿಸಿ ಎಲ್ಲವೂ ನಾಶವಾಗಿ, ಒಂದು ನಗರದಿಂದ ಮತ್ತೊಂದು ನಗರಕ್ಕೆ ವಲಸೆ ಹೋಗಿದ್ದರೆ ಅವರ ಬಳಿ 40-50 ವರ್ಷ ಹಳೆಯ ದಾಖಲಾತಿಗಳು ಎಲ್ಲಿರುತ್ತವೆ ಎಂದು ರಿಝ್ವಾನ್ ಅರ್ಷದ್ ಪ್ರಶ್ನಿಸಿದರು. ನ್ಯಾಯಾಲಯವು ಈ ಕಾನೂನನ್ನು ರದ್ದುಗೊಳಿಸುವ ವಿಶ್ವಾಸವಿದೆ. ಕೇಂದ್ರ ಸರಕಾರ ನೋಟು ರದ್ಧತಿ, ಜಿಎಸ್‌ಟಿ ಜಾರಿ ಮಾಡಿ ಆರ್ಥಿಕತೆಯನ್ನು ಮುಗಿಸಿದೆ. ಈಗ ಇಡೀ ದೇಶದ ಜನರನ್ನು ಗೊಂದಲದಲ್ಲಿ ಸಿಲುಕಿಸಿದೆ. ಜನರ ಆಲೋಚನಾ ಶಕ್ತಿಯನ್ನು ಕಸಿಯಲು ನಡೆಯುತ್ತಿರುವ ಷಡ್ಯಂತ್ರ ಇದು ಎಂದು ಅವರು ಹೇಳಿದರು.

ಜಿಡಿಪಿ ಕುಸಿತ, ರಫ್ತು ನಿಂತಿದೆ, ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಇದು ಕೇವಲ ಮುಸ್ಲಿಮರಿಗಷ್ಟೇ ಸೀಮಿತವಲ್ಲ. ಎಲ್ಲರೂ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಎನ್‌ಆರ್‌ಸಿ-ಸಿಎಬಿ ಜಾರಿಯಿಂದ ಬಿಜೆಪಿ, ಆರೆಸೆಸ್ಸ್‌ಗೆ ಮಾನಸಿಕ ನೆಮ್ಮದಿ ಸಿಗಬಹುದು. ಆದರೆ, 130 ಕೋಟಿ ಜನರು ಎದುರಿಸುವ ನೋವಿನ ಬೆಲೆಯನ್ನು ಮೋದಿ ಮುಂದಿನ ಚುನಾವಣೆಯಲ್ಲಿ ಎದುರಿಸುತ್ತಾರೆ ಎಂದು ರಿಝ್ವಾನ್ ಅರ್ಷದ್ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ದೇಶದ ಸ್ವಾತಂತ್ರಕ್ಕಾಗಿ ನಮ್ಮ ಕೊಡುಗೆಯೂ ಇದೆ. ಸಂವಿಧಾನ ಇನ್ನೂ ಜೀವಂತವಾಗಿದೆ. ಸಂವಿಧಾನ ಬದಲಾಯಿಸುವ ಮಾತುಗಳನ್ನು ಆಡುತ್ತಿದ್ದವರು, ತಮ್ಮ ಕೆಲಸದಲ್ಲಿ ಯಶಸ್ಸು ಕಾಣದೆ ಇದ್ದಿದ್ದರಿಂದ, ಈಗ ಹಿಂಬಾಗಿಲ ಮೂಲಕ ಈ ಕೆಲಸವನ್ನು ಮಾಡುತ್ತಿದ್ದಾರೆ.
-ರಿಝ್ವಾನ್ ಅರ್ಷದ್, ಶಿವಾಜಿನಗರ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News