ಅಸ್ಸಾಂ ಗೋಲಿಬಾರ್ ಎನ್ ಕೌಂಟರ್ ನಂತಿತ್ತು: ಪ್ರತ್ಯಕ್ಷದರ್ಶಿಗಳ ಹೇಳಿಕೆ

Update: 2019-12-14 14:46 GMT

ಗುವಾಹಟಿ, ಡಿ.14: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಗುರುವಾರ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಪೊಲೀಸರ ಗುಂಡೇಟಿಗೆ ಇಬ್ಬರು ಯುವಕರು ಬಲಿಯಾದ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು, ಪೊಲೀಸರು ಯಾವುದೇ ಪ್ರಚೋದನೆಯಿಲ್ಲದೆ, ಎಚ್ಚರಿಕೆಯನ್ನೂ ನೀಡದೆ ಗುಂಡು ಹಾರಿಸಿದ್ದಾರೆ ಎಂದಿದ್ದಾರೆ.

ಅಸ್ಸಾಂನ ಹಾತಿಗಾಂವ್ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಐದು ವಾಹನಗಳಲ್ಲಿ ಆಗಮಿಸಿದ ಪೊಲೀಸರು ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿದರು. ಹೆಲ್ಮೆಟ್ ಧರಿಸಿದ್ದ ಹಲವರು ಜೀಪಿನಿಂದ ಕೆಳಗಿಳಿದು ಸಜ್ಜಾಗಿ ನಿಂತರು. ಕಡೆಯ ವಾಹನದಿಂದ ಕೆಳಗಿಳಿದವರು ಯಾವುದೇ ಎಚ್ಚರಿಕೆ ನೀಡದೆ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದರು ಎಂದು ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಆಸಿಫ್ ಎಂಬವರು ಹೇಳಿದ್ದಾರೆ.

 ಅಶ್ರುವಾಯು ಅಥವಾ ರಬ್ಬರ್ ಗುಂಡುಗಳನ್ನು ಬಳಸಬಹುದಿತ್ತು. ಆದರೆ ಎಚ್ಚರಿಕೆಯನ್ನೂ ನೀಡದೆ ಏಕಾಏಕಿ ಗುಂಡು ಹಾರಿಸಿದರು. ನೇರ ಎನ್‌ಕೌಂಟರ್ ಇದಾಗಿತ್ತು ಎಂದು ಆಸಿಫ್ ವಿವರಿಸಿದ್ದಾರೆ. ಸ್ಥಳೀಯ ವ್ಯಾಪಾರಿ ನಿಯಾಝ್ ಅಹ್ಮದ್ ಎಂಬವರೂ ಈ ಮಾತಿಗೆ ಧ್ವನಿಗೂಡಿಸಿದ್ದಾರೆ. ಪ್ರತಿಭಟನಾಕಾರರು ಹಿಮ್ಮೆಟ್ಟಿದರೂ ಅವರನ್ನು ಬೆನ್ನಟ್ಟಿ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ನಿಯಾಝ್ ಹೇಳಿದ್ದಾರೆ. ಪ್ರತಿಭಟನಾಕಾರರು ಚದುರಿದ ಬಳಿಕ ತಮ್ಮ ವಾಹನ ಹತ್ತಿ ಅಲ್ಲಿಂದ ತೆರಳುವ ದಾರಿಯುದ್ದಕ್ಕೂ ಪೊಲೀಸರು ಗುಂಡು ಹಾರಿಸುತ್ತಾ ಸಾಗಿದ್ದಾರೆ. ಪ್ರತಿಭಟನಾಕಾರರು ಭದ್ರತಾ ಪಡೆಗಳತ್ತ ಕಲ್ಲೆಸೆದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 ಈ ಗೋಲಿಬಾರಿನಲ್ಲಿ 17 ವರ್ಷದ ಸ್ಯಾಮ್ ಸ್ಟಫೋರ್ಡ್ ಹಾಗೂ 19 ವರ್ಷದ ದೀಪಾಂಜಲ್ ದಾಸ್ ಎಂಬವರು ಮೃತಪಟ್ಟಿದ್ದರು. ಘಟನೆ ನಡೆದ ಗುರುವಾರ ಬುಲೆಟ್ ಏಟಿನಿಂದ ಗಾಯಗೊಂಡಿದ್ದ ಸುಮಾರು 26 ಜನರನ್ನು ಸರಕಾರಿ ಸ್ವಾಮ್ಯದ ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರಕಾರ ಹೇಳಿಕೆ ನೀಡಿದೆ.

ಸೈನಿಕ ಭವನದಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ದೀಪಾಂಜಲ್ ದಾಸ್ 5 ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಆತನ ಸಹೋದರ ಹೇಳಿದ್ದಾನೆ. ಗಾಯಗೊಂಡವರಲ್ಲಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ರಸ್ತೆ ಬದಿ ನಿಂತಿದ್ದವರಿಗೆ ಪೊಲೀಸರ ಗುಂಡೇಟು ತಗುಲಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಗುರುವಾರ ಸಂಜೆ ಸಮೀಪದ ಕೆಲವು ಅಂಗಡಿಗಳು ಬಾಗಿಲು ತೆಗೆದಿವೆ ಎಂಬ ವಿಷಯ ತಿಳಿದು ಹಾಲು ಖರೀದಿಸಲೆಂದು ಅಲ್ಲಿಗೆ ತೆರಳಿದ್ದೆ. ತನ್ನೊಂದಿಗೆ 25 ವರ್ಷದ ಪುತ್ರಿ ಸುಸಾನಾ ಮತ್ತು ನೆರೆಮನೆಯ ನಝ್ಮಿ ಬೇಗಂ ಇದ್ದರು. ಆದರೆ ಆಗ ರಸ್ತೆಯಲ್ಲಿ ಪ್ರತಿಭಟನಾ ಜಾಥಾ ಸಾಗುತ್ತಿತ್ತು. ಆದ್ದರಿಂದ ರಸ್ತೆ ಬದಿ ನಿಂತು ನೋಡುತ್ತಿದ್ದೆವು. ಆಗ ಒಮ್ಮಿಂದೊಮ್ಮೆಗೇ ನಾಲ್ಕೈದು ಪೊಲೀಸ್ ವಾಹನಗಳು ಅಲ್ಲಿಗೆ ಬಂದವು. ಪೊಲೀಸ್ ವಾಹನ ರಸ್ತೆಯಲ್ಲಿ ನಿಂತೊಡನೆ ಬೀದಿ ದೀಪಗಳು ಆರಿಹೋದವು. ಏಕಾಏಕಿ ಗುಂಡಿನ ಸದ್ದು ಮತ್ತು ಜನರ ಚೀರಾಟ, ಕೂಗಾಟ ಕೇಳಿ ಬಂದಿತು. ಜನ ಕತ್ತಲೆಯಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವುದು ಕಂಡು ಬಂದಿತು ಎಂದು ಸ್ಥಳೀಯ ನಿವಾಸಿ, 51 ವರ್ಷದ ನಾಝ್ಮೀನ್ ಅಫ್ರೋಝ್ ಹೇಳಿದ್ದಾರೆ.

ತಕ್ಷಣ ನಾವು ಮೂವರೂ ಅಲ್ಲಿಂದ ಸಣ್ಣ ಓಣಿಯ ಮೂಲಕ ಓಡಿಹೋಗಿ ಮನೆಯೊಂದರ ಒಳಹೊಕ್ಕೆವು. ಆಗ ತನ್ನ ಕಾಲಿನಲ್ಲಿ ನೋವಿನ ಅನುಭವವಾಯಿತು. ಮುಟ್ಟಿ ನೋಡಿದಾಗ ಗುಂಡೇಟು ತಗುಲಿ ರಕ್ತ ಸುರಿಯುತ್ತಿತ್ತು. ನಝ್ಮಿ ಬೇಗಂಳ ಕಾಲಿಗೂ ಗುಂಡೇಟು ಬಿದ್ದಿತ್ತು ಎಂದು ನಾಝ್ಮೀನ್ ಹೇಳಿದ್ದಾರೆ. ಇದೇ ರೀತಿ ತರಕಾರಿ ಮತ್ತು ಬೇಳೆ ಖರೀದಿಸಲು ಮನೆಯಿಂದ ಹೊರಟಿದ್ದ 62 ವರ್ಷದ ರಾಜೆನ್ ಮೇಧಿ ಎಂಬವರೂ ಗುಂಡೇಟಿನಿಂದ ಗಾಯಗೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಎಚ್ಚರಿಕೆ ನೀಡದೆ, ಅಪ್ರಚೋದಿತವಾಗಿ ಕನಿಷ್ಟ 5 ನಿಮಿಷ ಕತ್ತಲೆಯಲ್ಲಿ ಗುಂಡು ಹಾರಿಸಿದ್ದರು. ರಸ್ತೆ ಬದಿ ನಿಂತಿದ್ದ ಅಮಾಯಕರೂ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅಮರೇಂದ್ರ ಕುಮಾರ್ ಜಾಧವ್ ಹೇಳಿದ್ದಾರೆ.

ಪರಿಸ್ಥಿತಿ ಸಹಜತೆಗೆ ಮರಳುವುದಾದರೆ ಒಂದಿಬ್ಬರಿಗೆ ಗುಂಡೇಟು ಬಿದ್ದರೂ ಪರವಾಗಿಲ್ಲ

ಆದರೆ ಅನಗತ್ಯವಾಗಿ ಬಲಪ್ರಯೋಗಿಸಿರುವ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಭದ್ರತಾ ಸಿಬಂದಿ ನಡೆಸಿದ್ದಾರೆ. ಪರಿಸ್ಥಿತಿ ಸಹಜತೆಗೆ ಮರಳುವುದಾದರೆ ಒಂದಿಬ್ಬರಿಗೆ ಗುಂಡೇಟು ಬಿದ್ದರೂ ಪರವಾಗಿಲ್ಲ ಎಂದು ಅಸ್ಸಾಂ ಪೊಲೀಸ್ ಹೆಚ್ಚುವರಿ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಜಿಪಿ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News