ಅತ್ಯಾಚಾರಗೈದು ಯುವತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ: ಉ.ಪ್ರದೇಶದಲ್ಲಿ ಮತ್ತೊಂದು ಹೀನ ಕೃತ್ಯ

Update: 2019-12-14 15:01 GMT

ಲಕ್ನೊ, ಡಿ.14: ಉನ್ನಾವೊದಲ್ಲಿ ಮಹಿಳೆಯ ಮೇಲೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಘಟನೆ ಹಸಿರಾಗಿರುವಂತೆಯೇ ಉತ್ತರಪ್ರದೇಶದಲ್ಲಿ ಶನಿವಾರ ಮತ್ತೊಂದು ಅಮಾನುಷ ಕೃತ್ಯ ವರದಿಯಾಗಿದೆ. ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಲಾಗಿದ್ದು ಶೇ.90ರಷ್ಟು ಸುಟ್ಟ ಗಾಯವಾಗಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯುವತಿ ಉತ್ತರಪ್ರದೇಶದ ಫತೇಹ್‌ಪುರ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾಗಿದ್ದು, ಆಕೆಯ ಸಮೀಪದ ಬಂಧುವೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ತಾನು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಮನೆಗೆ ನುಗ್ಗಿದ ಆರೋಪಿ ಅತ್ಯಾಚಾರ ಎಸಗಿದ ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ.

ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು ಕಾನ್ಪುರ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಅನುರಾಗ್ ರಜೋರಿಯಾ ಹೇಳಿದ್ದಾರೆ. ಸಂತ್ರಸ್ತ ಯುವತಿಯ ತಂದೆ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆತನ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ಹಾಗೂ ಆರೋಪಿಯ ಮಧ್ಯೆ ಸ್ನೇಹ ಸಂಬಂಧವಿತ್ತು. ಆದರೆ ಮದುವೆಯಾಗುವವರೆಗೆ ಪ್ರತ್ಯೇಕವಾಗಿ ವಾಸಿಸಬೇಕು ಎಂದು ಗ್ರಾಮದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂಬ ವಿಷಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಯುವತಿಯ ಮನೆಯ ಬಳಿಯೇ ಆರೋಪಿಯ ಮನೆಯಿತ್ತು. ಇವರಿಬ್ಬರ ಮಧ್ಯೆ ಸಂಬಂಧವಿದ್ದ ಕಾರಣ ಪಂಚಾಯತ್ ಸಭೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಬೇಕೆಂದು ಸೂಚಿಸಲಾಗಿತ್ತು. ಇದಕ್ಕೆ ಇಬ್ಬರೂ ಒಪ್ಪಿ ಪ್ರಮಾಣ ಮಾಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಜೀತ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News