ಭಾರತದ ಪೌರತ್ವ ಮಸೂದೆಯ ಪರಿಣಾಮಗಳ ಬಗ್ಗೆ ಕಳವಳ

Update: 2019-12-19 06:41 GMT
file photo

ವಾಶಿಂಗ್ಟನ್, ಡಿ. 14: ಭಾರತದ ಪೌರತ್ವ (ತಿದ್ದುಪಡಿ) ಮಸೂದೆಯ ಪರಿಣಾಮಗಳ ಬಗ್ಗೆ ಅಮೆರಿಕ ಕಳವಳ ಹೊಂದಿದೆ ಎಂದು ಅಂತರ್‌ರಾಷ್ಟ್ರಿಯ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿಗಾ ಇಡುವ ಜವಾಬ್ದಾರಿ ಹೊಂದಿರುವ ಅಮೆರಿಕದ ಉನ್ನತ ರಾಜತಾಂತ್ರಿಕ ಶುಕ್ರವಾರ ಹೇಳಿದ್ದಾರೆ.

‘‘ಭಾರತದ ಅತ್ಯುನ್ನತ ಶಕ್ತಿಗಳ ಪೈಕಿ ಸಂವಿಧಾನವೂ ಒಂದು. ಸಹ ಪ್ರಜಾಪ್ರಭುತ್ವ ದೇಶವಾಗಿ ನಾವು ಭಾರತದ ಸಂಸ್ಥೆಗಳನ್ನು ಗೌರವಿಸುತ್ತೇವೆ. ಆದರೆ, ಅದರ ಪೌರತ್ವ (ತಿದ್ದುಪಡಿ) ಮಸೂದೆಯ ಪರಿಣಾಮಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ’’ ಎಂದು ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ರಾಯಭಾರಿ (ಅಂಬಾಸಡರ್ ಎಟ್ ಲಾರ್ಜ್) ಸ್ಯಾಮ್ ಬ್ರೌನ್‌ಬ್ಯಾಕ್ ಟ್ವೀಟ್ ಮಾಡಿದ್ದಾರೆ.

 ‘‘ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವುದೂ ಸೇರಿದಂತೆ ತನ್ನ ಸಾಂವಿಧಾನಿಕ ಬದ್ಧತೆಗಳನ್ನು ಭಾರತ ಸರಕಾರ ಗೌರವಿಸುತ್ತದೆ ಎಂದು ನಾವು ಆಶಿಸುತ್ತೇವೆ’’ ಎಂದು ಅವರು ತನ್ನ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮುಂದಿನ ವಾರ ನಡೆಯಲಿರುವ ಭಾರತ ಮತ್ತು ಅಮೆರಿಕಗಳ ನಡುವಿನ 2+2 ಸಚಿವ ಮಟ್ಟದ ಸಭೆಗೆ ಕೆಲವೇ ದಿನಗಳು ಇರುವಾಗ ಅಮೆರಿಕದ ರಾಜತಾಂತ್ರಿಕನ ಈ ಹೇಳಿಕೆ ಹೊರಬಿದ್ದಿದೆ.

2+2 ಮಾತುಕತೆ ಡಿಸೆಂಬರ್ 18ರಂದು ವಾಶಿಂಗ್ಟನ್‌ನಲ್ಲಿ ನಡೆಯಲಿದೆ. ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಕ್ರಮವಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಜೊತೆ ಮಾತುಕತೆ ನಡೆಸಲಿದ್ದಾರೆ.

ಕಾಶ್ಮೀರ, ಅಸ್ಸಾಮ್‌ನ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಕಳವಳ

ಈ ನಡುವೆ, ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್, ಎಮ್ಗೇಜ್ ಆ್ಯಕ್ಷನ್ ಮತ್ತು ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಗಳು ಗುರುವಾರ ಏರ್ಪಡಿಸಿದ ಸಂಸತ್ ವಿಚಾರಣೆಯಲ್ಲಿ, ಜನೋಸೈಡ್ ವಾಚ್ ಸಂಘಟನೆಯ ಗ್ರೆಗರಿ ಸ್ಟಾಂಟನ್ ಕಾಶ್ಮೀರ ಮತ್ತು ಅಸ್ಸಾಮ್‌ನಲ್ಲಿ ನೆಲೆಸಿರುವ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಟಾಂಟನ್ 1996ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ‘ಜನಾಂಗೀಯ ಹತ್ಯೆಯ 10 ಮಜಲುಗಳು’ ಎಂಬ ಪ್ರಸಿದ್ಧ ಸಿದ್ಧಾಂತವನ್ನು ಮಂಡಿಸಿದ್ದರು.

‘‘ಮುಸ್ಲಿಮರನ್ನು ಹೊರಗಟ್ಟಲು ಅಸ್ಸಾಮ್‌ನಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ’’ ಎಂದು ಹೇಳಿದ ಸ್ಟಾಂಟನ್, ‘‘ಕಾಶ್ಮೀರ ಮತ್ತು ಅಸ್ಸಾಮ್ ಎರಡರಲ್ಲೂ ‘ಈಗ ನಡೆಯುತ್ತಿರುವ ಜನಾಂಗೀಯ ಹತ್ಯೆ’ಯು ‘ಜನಾಂಗೀಯ ಹತ್ಯೆಯ 10 ಮಜಲು’ಗಳ ಪ್ರಕಾರವೇ ನಡೆಯುತ್ತಿದೆ ಹಾಗೂ ತನ್ನ ಸಿದ್ಧಾಂತದ ‘ಪರಿಪೂರ್ಣ ಉದಾಹರಣೆಯಾಗಿದೆ’ ’’ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News