ಪ್ರಾಮಾಣಿಕ ಸೌಂದರ್ಯದ ಸಹಜ ರೂಪಕ ಸಾಲುಗಳು

Update: 2019-12-15 11:32 GMT

ಇತ್ತೀಚೆಗೆ ಕಾವ್ಯದ ಫಸಲು ಬಲು ಹುಲುಸಾಗಿ ಬೆಳೆಯುತ್ತಿ ರುವುದು ಕಂಡು ಬರುತ್ತಿದೆ. ಅದಕ್ಕೆ ಸಾಕ್ಷಿ ಹೊಸಬರ ಕವನ ಸಂಕಲನಗಳು ಹೆಚ್ಚು ಹೆಚ್ಚು ಪ್ರಕಟವಾಗುತ್ತಿರುವುದು. ಇದು ಕನ್ನಡ ಕಾವ್ಯದ ಆರಾಧಕರಿಗೆ ಸಂಭ್ರಮದ ಸಂಗತಿ. ಕೊಪ್ಪಳದ ಯುವಕವಿ ಮೆಹಬೂಬ್‌ಪಾಷಾ ಮಕಾನದಾರ ತಮ್ಮ ಚೊಚ್ಚಲ ಕವನ ಸಂಕಲನ ಒಂದೇ ಬಳ್ಳಿಯ ಹೂಗಳು ಪ್ರಕಟಿಸಿದ್ದಾರೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಾಗಿದೆ ಎಂಬುದು ಗಮನಾರ್ಹ. ಮೊದಲ ಓದಿನಲ್ಲಿಯೇ ಮೆಹಬೂಬ್ ತುಂಬಾ ಹತ್ತಿರವಾಗುತ್ತಾರೆ. ಹುಸಿನಗುತ ಬಂದೇವ ತುಸು ನಗುತ ತೆರಳೋಣ ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ? ಎನ್ನುತ್ತಾರೆ ವರಕವಿ ಬೇಂದ್ರೆ. ಇದು ನೆನಪಾದದ್ದು ಮೆಹಬೂಬರ ಸಂಕಲನದ ಅನೇಕ ಕವಿತೆಗಳಲ್ಲಿನ ಸಾಮರಸ್ಯ, ಹೊಂದಾಣಿಕೆ, ಅನ್ಯೋನ್ಯ ಭಾವದ ಕವಿತೆಯ ಸಾಲುಗಳನ್ನು ಓದಿದಾಗ. ಧರ್ಮ, ದೇವರು, ಜಾತಿ ಸಂಘರ್ಷದ ಇಂದಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ ಹೆಚ್ಚಾದರೆ ಹಂಚಿಕೊಳ್ಳೋಣ ಏನಾದರೂ ಇರಲಿ ನಮ್ಮಲ್ಲಿಯೇ ಮುಚ್ಚಿಕೊಳ್ಳೋಣ ಎಂಬ ಸಾಲುಗಳು ಭಾೈಕ್ಯದ ಕೊಂಡಿಯಂತೆ ಕಾಣಿಸುತ್ತವೆ.

ವಯೋಸಹಜ ಭಾವನೆಗಳನ್ನು ಬಡಿದೆಬ್ಬಿಸುವ ಪ್ರೀತಿ-ಪ್ರೇಮದ ಕವಿತೆಗಳು ಸಂಕಲನದಲ್ಲಿ ಜಾಗೆ ಪಡೆದಿಲ್ಲ ಅಂತಲ್ಲ; ಆದರೆ ಅಲ್ಲಲ್ಲಿ ಮಿಂಚಿನಂತೆ ಕೋರೈಸುವ ವಿಚಾರ ಪ್ರಚೋದಕ ಸಾಲುಗಳು ಗಕ್ಕನೆ ಅಲ್ಲಿಯೇ ನಿಂತು ಬಿಡುವಂತೆ ಮಾಡುತ್ತವೆ. ಆನಂದ ಕುಂಚನೂರ ಹೇಳುವ ಹಾಗೆ ಪ್ರೇಮವನ್ನು, ವಿರಹವನ್ನು, ವಾತ್ಸಲ್ಯವನ್ನು ಉತ್ಕಟವಾಗಿ ಅನುಭವಿಸಿ ಹೇಳುವ ಕಲೆ ಮೆಹಬೂಬ್ ಅವರಿಗೆ ದಕ್ಕಿದೆ. ಮೌನ ಹೊರಡಿಸುವ ಅರ್ಥಗಳನ್ನು ಯಾವ ಮಾತೂ ಹೊರಡಿಸಲಾರದು ಎಂಬ ಸತ್ಯ ಈ ಕವಿಗೆ ಗೊತ್ತಿದೆ. ಸಾಮರಸ್ಯದ ಕನಸುಗಳನ್ನು ಹೊತ್ತ ಭರವಸೆಯ ಕವಿತೆಗಳನ್ನು ಎದೆಯಿಂದೆದೆಗೆ ದಾಟಿಸುವ ತಾಕತ್ತು ಮೆಹಬೂಬ್ ಅವರ ಕವಿತೆಗಳಿಗಿದೆ. ಹಾಗೆಂದೇ ಇವರ ಮುಂದಣ ಹಾದಿ ಭರವಸೆಯ ಕೃಷಿಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ.

ನಿನಗೆ ಹುಣ್ಣಿಮೆಯ ಬೆಳದಿಂಗಳು

ತರುವ ಚಂದ್ರ

ನನಗೆ ರಮಝಾನ್ ತರುತ್ತಾನೆ

ನಿನ್ನ ಅಮ್ಮ ನಿನಗೆ ತೋರಿಸೋ ಚಂದ್ರ

ನನ್ನ ಅಮ್ಮಿಗೂ ಮಾತಾಡಿಸುತ್ತಾನೆ

ಎನ್ನುವ ಶೀರ್ಷಿಕೆಯ ಕವಿತೆ ಒಂದೇ ಬಳ್ಳಿಯ ಹೂಗಳು ಶುದ್ಧ ಮಾನವ ಪ್ರೀತಿ, ಮಾನವೀಯ ಅಂತಃಕರಣವನ್ನು ಅನುರಣಿಸುತ್ತದೆ. ಪರಸ್ಪರರ ಅವಲಂಬನೆಯ ಬದುಕಿಗೆ ಕನ್ನಡಿ ಹಿಡಿಯುವ ಕವಿತೆ, ನಿನ್ನ ಏಳ್ಗೆಯಾಗದೆ ನನ್ನ ಸ್ಥಿತಿಯೂ ಸುಧಾರಿಸದು. ನಿನ್ನ ಮಸೀದಿಯ ಮಿನಾರಿನ ತುದಿಯಿಂದ ಹೊರಡುವ ಮೌಲ್ವಿಯ ಆಝಾನ್, ನನ್ನ ಮಂದಿರದ ಘಂಟಾನಾದ ಎಂದಿಗೂ ಒಂದಾಗಲಾರವು ಎನ್ನುವ ನಿರಾಶವಾದಕ್ಕೆ ಮೆಹಬೂಬ್‌ರ ಕವಿತೆ ನನ್ನ ಈದ್‌ನಲ್ಲಿನ ಶಾಂತಿ, ನಿನ್ನ ದೀಪಗಳ ಕಾಂತಿ ಎರಡೂ ಒಂದೇ ಎನ್ನುವ ಮೂಲಕ ಆಶಾವಾದ ಬಿತ್ತುತ್ತಾರೆ. ‘ಮಾನವ ಕುಲಂ ತಾನೊಂದೇ ವಲಂ’ ಎನ್ನುವ ಪಂಪನ ಹೇಳಿಕೆ ಕವಿತೆಯ ತುಂಬೆಲ್ಲ ಸುಳಿದಾಡುತ್ತದೆ. ನೀ ಹಿಂದಾದರೆ ನಾ ಮುಂದೆ ಸಾಗಲ್ಲ ಎನ್ನುವ ವಾಸ್ತವವವೂ ಕವಿತೆಯ ಆಂತರ್ಯದಲ್ಲಡಗಿದೆ.

ಪ್ರೇಮದ ಹಾದಿಯೇ ಅಂತಹುದು. ಅದು ಏಕಾಏಕಿ ಯಾಗಿ ಯಾವ ತಿರುವಿನಲ್ಲಿ ಅಂತ್ಯವಾಗುತ್ತದೋ ಗೊತ್ತಾಗು ವುದಿಲ್ಲ. ಉ್ಕಟ ಪ್ರೀತಿಯ ಸಾಂಗತ್ಯದಲ್ಲಿ ಬದುಕಿನ ಸಾರ್ಥಕ್ಯತೆಯನ್ನು ಪಡೆಯುವ ಘಳಿಗೆಯಲ್ಲಿಯೇ ಬಿಟ್ಟೆದ್ದು ಹೊರಟು ನಿಂತ ಪ್ರೇಯಸಿಯೊಬ್ಬಳ ಕಿರುಬೆರಳ ಸ್ಪರ್ಶಿಸಿ ಆತ್ಮನಿವೇದನೆ ಮಾಡುವುದಿದೆಯಲ್ಲ ಅದು ಎದೆಬಿರಿದು ಹೋಳಾದ ಕ್ಷಣ. ಇಲ್ಲಿ ಕವಿ ಆಕ್ರೋಶಕ್ಕೆ ಒಳಗಾಗದೆ ಅವಳನ್ನು ಕೂರಿಸಿ ತೋಡಿಕೊಳ್ಳುವ ಮನದಿಂಗಿತ ಎಂತಹ ಕಲ್ಲೆದೆಯವನನ್ನು ಕರಗಿಸುವಂತಹದ್ದು. ಬಹುಶಃ ಇಂತಹ ನಾವೀನ್ಯತೆಯ ತಾಜಾ ಸಾಲುಗಳಿಗಾಗಿಯೇ ಮೆಹಬೂಬ್ ತುಂಬ ಇಷ್ಟವಾಗುತ್ತಾರೆ.

ಹೊರಟಿರುವೆಯಾ ಬಾ

ನನ್ನ ಬಳಿ ಕುಳಿತುಕೊ ಯಾಕೋ

ಅಳುವ ಮನಸ್ಸಾಗಿದೆ

ನಿನ್ನ ಮಡಿಲಲ್ಲಿ ಮುಖ ಮುಚ್ಚಿ

ಮನಸಾರೆ ಅತ್ತು ಬಿಡುವೆ

ಕಣ್ಣೀರು ತೋರಿಸಲ್ಲ

ನೀ ಉಟ್ಟ ಸೀರೆ ತೋಯಿಸುವುದಿಲ್ಲ

ನಿನ್ನಾಣೆಗೂ

(ಆತ್ಮ ಬೆಸೆಯುವುದಾದರೆ)

ಕೊನೆಗೆ ಆಕೆಗೆ ಹೇಳುವ ಸಾಲುಗಳು ಅರ್ಥಪೂರ್ಣವೆನಿಸುತ್ತವೆ; ಬಾ ಮರಳಿ ಆತ್ಮಕ್ಕೆ ಆತ್ಮ ಬೆಸೆಯುವುದಾದರೆ ಮಾತ್ರ ಇಂತಹ ಅಧ್ಯಾತ್ಮದ ಸಾಲುಗಳು ಇಹಲೋಕದ ಹಂಗು ಹರಿದು ಆತ್ಮಬಾಂಧವ್ಯವನ್ನು ಬೆಸೆಯುತ್ತವೆ. ಕವಿಗೆ ತನ್ನ ಕವಿತೆಯ ಇತಿಮಿತಿಗಳ ಅರಿವಿದೆ. ಹಾಗೆಯೇ ಜವಾಬ್ದಾರಿ, ಕರ್ತವ್ಯಗಳ ಪ್ರಜ್ಞೆ ಕೂಡ ಇದೆ. ಹಾಗೆಂದೇ ಆತ ಆಂತರಂಗಿಕ ಪರಿಶೋಧನೆಯನ್ನು ಕೈಗೊಂಡು ಸುತ್ತಣ ಸಮಾಜದ ಓರೆ-ಕೋರೆಗಳನ್ನು ಬದಲಾಯಿಸಲೆತ್ನಿಸುತ್ತಾನೆ. ತನ್ನೊಳಗಣ ಕಿಚ್ಚು ತನ್ನನ್ನೇ ಸುಡುವ ಸಾಮಾನ್ಯ ಸಂಗತಿ ಕಂಡೇ ಭೂತದ ಬಾಯಲ್ಲಿ ಭಗವದ್ಗೀತೆ ವ್ಯರ್ಥ ಎಂಬ ಸತ್ಯದ ದರ್ಶನ ಮಾಡಲೆತ್ನಿಸುತ್ತಾನೆ.

ನನ್ನೀ ಕವಿತೆ

ತನ್ನೊಳಗಿನ ಬಾಂಬು, ಗನ್ನುಗಳನ್ನು

ತುಂಬಿಕೊಂಡಿರುವಾಗ

ಬುದ್ಧ ಶಾಂತಿಯ ಮಂತ್ರ

ಜಪಿಸುವುದೆಂದು

(ನನ್ನ ಕವಿತೆ)

ಸಾಕಷ್ಟು ಕಡೆ ನಮ್ಮನ್ನು ಗೆಲ್ಲುವ ಮೆಹಬೂಬ್‌ರ ಕಾವ್ಯ ಖುಷಿ ನೀಡುತ್ತದೆ. ಒಂದಷ್ಟು ಚಿಂತನೆಗೂ ದೂಡುತ್ತದೆ. ಒಂದಾಗಿ ಬೆರೆತು ಬಾಳುವ ಆನಂದದಿಂದ ವಂಚಿತರಾಗದಿರಿ ಎಂದು ಕರೆ ಕೊಡುತ್ತದೆ. ಸಂಕಲನದ ಕೊನೆಯಲ್ಲಿ ಸೇರಿಸುವ ಹನಿಗಳಂತೂ ಕೋಲ್ಮಿಂಚಿನಂತೆ ಥಟ್ಟನೆ ಜ್ಞಾನೋದಯದ ಪರಮಾವಧಿಗೆ ಕರೆದೊಯ್ಯುತ್ತವೆ. ಅವಳ ಮಾತಿಗಿಂತ ಮೌನವೇ ಹೆಚ್ಚು ಅರ್ಥವಾಗಿದ್ದು, ಈಗಷ್ಟೇ ತಂಗಾಳಿ ತಾಗಿ ಹೋಯಿತು ಅವ್ವ ನೆನೆಸಿರಬೇಕು ಚುಟುಕಾದರೂ ಹೊಮ್ಮಿಸುವ ಧ್ವನಿ ಅಗಾಧ. ಹೃದಯ ಪಂಚಮಿ ಎಂಬ ಉಪಶೀರ್ಷಿಕೆ ಇರುವ ಒಂದೇ ಬಳ್ಳಿಯ ಹೂಗಳು ಸಂಕಲನ ಓದುಗರ ಪ್ರೀತಿಗೆ ಪಾತ್ರವಾಗುವಂತಿದೆ. ಮೊದಲ ಸಂಕಲನಕ್ಕೆ ಮೆಹಬೂಬ್‌ಗೆ ಶುಭ ಕೋರುವೆ.

ಒಂದೇ ಬಳ್ಳಿಯ ಹೂಗಳು-ಕವನ ಸಂಕಲನ

ಲೇಖಕರು- ಮೆಹಬೂಬಪಾಷಾ ಎ. ಮಕಾನದಾರ

ಪ್ರಕಾಶಕರು- ಮಕಾನದಾರ ಪ್ರಕಾಶನ ಕೊಪ್ಪಳ

ವರ್ಷ-2019 ಪುಟಗಳು-80 ಬೆಲೆ-100/-

Writer - ನಾಗೇಶ್ ಜೆ. ನಾಯಕ, ಉಡಿಕೇರಿ

contributor

Editor - ನಾಗೇಶ್ ಜೆ. ನಾಯಕ, ಉಡಿಕೇರಿ

contributor

Similar News