ಪೌರತ್ವ ಕಾಯ್ದೆ ವಿದುದ್ಧ ಪ್ರತಿಭಟನೆ: ಮಾಹಿತಿ, ಪ್ರಸಾರ ಇಲಾಖೆಯ ಸೂಚನೆ ಹಿಂಪಡೆಯಲು ‘ಎಡಿಟರ್ಸ್ ಗಿಲ್ಡ್’ ಆಗ್ರಹ

Update: 2019-12-19 07:00 GMT

ಹೊಸದಿಲ್ಲಿ, ಡಿ.15: ಹಿಂಸೆಗೆ ಪ್ರಚೋದನೆ ನೀಡುವ ಅಥವಾ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ತರುವಂತಹ ವಿಷಯಗಳನ್ನು ಒಳಗೊಂಡ ಸುದ್ದಿಗಳನ್ನು ಪ್ರಸಾರ ಮಾಡದಂತೆ ಡಿಸೆಂಬರ್ 12ರಂದು ಮಾಹಿತಿ, ಪ್ರಸಾರ ಇಲಾಖೆ ಎಲ್ಲಾ ಖಾಸಗಿ ಟಿವಿ ವಾಹಿನಿಗಳಿಗೆ ನೀಡಿದ್ದ ಸೂಚನೆಯನ್ನು ಹಿಂಪಡೆಯುವಂತೆ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಆಗ್ರಹಿಸಿದೆ.

ದೇಶದಲ್ಲಿ ಆಗುವ ಹೊಸ ಬೆಳವಣಿಗೆಯ ಬಗ್ಗೆ ಜವಾಬ್ದಾರಿಯುತ ರೀತಿಯಲ್ಲಿ ವರದಿ ಮಾಡುವ ಮಾಧ್ಯಮಗಳ ಒಟ್ಟು ಬದ್ಧತೆಯನ್ನು ಈ ರೀತಿಯ ಸೂಚನೆಯ ಮೂಲಕ ಪ್ರಶ್ನಿಸಬಾರದು. ಯಥಾರ್ಥ ಮತ್ತು ನಿಷ್ಪಕ್ಷಪಾತವಾದ ರೀತಿಯಲ್ಲಿ , ಮುಕ್ತವಾಗಿ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಮಾಧ್ಯಮಗಳ ಅನಿರ್ಬಂಧಿತ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಈ ರೀತಿಯ ಪ್ರತಿಗಾಮಿ ಸೂಚನೆಯನ್ನು ನಾವು ಆಕ್ಷೇಪಿಸುತ್ತೇವೆ ಎಂದು ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ದ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಅಲ್ಲದೆ ಅಸ್ಸಾಂನ ಟಿವಿ ವಾಹಿನಿ ಪ್ರಾಗ್ ನ್ಯೂಸ್‌ನ ಸಿಬ್ಬಂದಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸುವಂತೆಯೂ ಒತ್ತಾಯಿಸಲಾಗಿದೆ. ಪ್ರಾಗ್ ನ್ಯೂಸ್‌ನ ಕ್ಯಾಮೆರಾಮನ್ ಮೇಲೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿರುವ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸರು ಸಮರ್ಥಿಸಲಾಗದ ಹಿಂಸಾ ಕೃತ್ಯ ನಡೆಸಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

ದೇಶವಿರೋಧಿ ಮನೋಭಾವನೆಗೆ ಉತ್ತೇಜನ ನೀಡುವ ವಿಷಯಗಳನ್ನು ಒಳಗೊಂಡಿರುವ ಯಾವುದೇ ಸುದ್ದಿ ಪ್ರಸಾರ ಮಾಡಬಾರದೆಂದೂ ಸೂಚನೆಯಲ್ಲಿ ತಿಳಿಸಲಾಗಿತ್ತು. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News