ಸಿಎಬಿ, ಎನ್‌ಆರ್‌ಸಿ ಜಾರಿಗೆ ವಿರೋಧ: ಡಿ.19 ರಂದು ಸಿಪಿಎಂ ಜನಾಂದೋಲನಕ್ಕೆ ಕರೆ

Update: 2019-12-19 08:31 GMT

ಬೆಂಗಳೂರು, ಡಿ.15: ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಬಿಜೆಪಿ ಈ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಜಾರಿಗೆ ತಂದಿರುವುದು ಖಂಡನಾರ್ಹ. ಈ ಕಾಯ್ದೆ ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಡಿ. 19ರಂದು ಸಿಪಿಎಂನಿಂದ ರಾಜ್ಯದಾದ್ಯಂತ ಜನಾಂದೋಲನಕ್ಕೆ ಕರೆ ನೀಡಲಾಗಿದೆ.

ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಈ ಕಾಯ್ದೆಯು ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಸಂವಿಧಾನವು ಅಖಂಡತೆ, ಎಲ್ಲ ಧರ್ಮೀಯರಿಗೆ ಸಮಾನ ಅವಕಾಶಗಳನ್ನು ಕೊಡಬೇಕೆಂದು ತಿಳಿಸುತ್ತದೆ. ಆದರೆ, ಬಿಜೆಪಿಯವರು ಬಹುಮತವಿದೆ ಎಂದು ಮನಬಂದಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಅಲ್ಪಸಂಖ್ಯಾತರು ಈ ದೇಶದ ಒಂದು ಭಾಗ ಅವರನ್ನು ಹೊರಗಿಟ್ಟು ಕಾಯ್ದೆ ರೂಪಿಸಿರುವುದು ಬಹುತ್ವಕ್ಕೆ ದೊಡ್ಡ ಕೊಡಲಿ ಏಟು ಬಿದ್ದಂತೆ ಎಂದು ಸಿಪಿಎಂ ಕಾರ್ಯದರ್ಶಿ ಯು.ಬಸವರಾಜು ಹೇಳಿದ್ದಾರೆ.

ದೇಶದಲ್ಲಿ ನೆಲೆಸಿರುವ ಅನ್ಯ ರಾಷ್ಟ್ರಗಳ ವಲಸಿಗರನ್ನು ಸಕ್ರಮಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ, ಮುಸ್ಲಿಮರನ್ನು ಅದರಿಂದ ಹೊರಗಿಟ್ಟಿರುವುದು ಸರಿಯಲ್ಲ. ದೇಶದ ಪ್ರಜೆಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ವಿಷ ಬೀಜ ಬಿತ್ತುತ್ತಿರುವುದು ಅಪಾಯಕಾರಿ. ಧರ್ಮ, ಜಾತಿ, ಭಾಷೆ, ಪ್ರಾಂತದ ಆಧಾರದ ಮೇಲೆ ವಿಭಜನೆ ಸಲ್ಲದು’ ಎಂದು ಅವರು ತಿಳಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳು ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಸರಕಾರ ಕೂಡಲೇ ಅದನ್ನು ಹಿಂಪಡೆಯಬೇಕು. ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವುದು ತಪ್ಪಿಸಿಕೊಳ್ಳಲಿ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News