​ಅಕ್ರಮ ವಲಸಿಗರ ಪಟ್ಟಿ ಕೊಡಿ: ಭಾರತಕ್ಕೆ ಬಾಂಗ್ಲಾ ಆಗ್ರಹ

Update: 2019-12-16 04:21 GMT

ಢಾಕಾ : ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎನ್ನಲಾದ ಬಾಂಗ್ಲಾ ಪ್ರಜೆಗಳ ಪಟ್ಟಿ ಕೊಡಿ; ಅವರನ್ನು ವಾಪಾಸು ಸ್ವದೇಶಕ್ಕೆ ಕರೆಸಿಕೊಳ್ಳುತ್ತೇವೆ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.

ಭಾರತದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್‌ಶಿಪ್ (ಎನ್‌ಆರ್‌ಸಿ) ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಭಾರತ ಹಾಗೂ ಬಾಂಗ್ಲಾದೇಶದ ಸಂಬಂಧ ಸಹಜವಾಗಿದೆ ಹಾಗೂ ಸುಮಧುರವಾಗಿದೆ. ಇದರಿಂದ ನಮಗೇನೂ ತೊಂದರೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮೊಮೆನ್ ಅವರು ಉದ್ದೇಶಿತ ಭಾರತ ಭೇಟಿ ರದ್ದುಪಡಿಸಿದ್ದರು.

ಎನ್‌ಆರ್‌ಸಿ ಪ್ರಕ್ರಿಯೆಯನ್ನು ಆಂತರಿಕ ವಿಚಾರ; ಇದರಿಂದ ಬಾಂಗ್ಲಾದೇಶಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದಾಗಿ ಅವರು ಹೇಳಿದ್ದಾರೆ. ಭಾರತದಿಂದ ಅಕ್ರಮ ವಲಸಿಗರ ವಾಪಾಸಾತಿ ಬಗ್ಗೆ ಇರುವ ವದಂತಿಗಳನ್ನು ತಳ್ಳಿಹಾಕಿದ ಅವರು, ಆರ್ಥಿಕ ಕಾರಣಗಳಿಗಾಗಿ ಕೆಲ ಭಾರತೀಯರು ಮಧ್ಯವರ್ತಿಗಳ ಮೂಲಕ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಆದರೆ ಬಾಂಗ್ಲಾದೇಶದ ಪ್ರಜೆಗಳನ್ನು ಹೊರತುಪಡಿಸಿ ಯಾರೇ ನಮ್ಮಲ್ಲಿಗೆ ಬಂದರೂ ನಾವು ವಾಪಾಸು ಕಳುಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಭಾರತದಲ್ಲಿ ಯಾರಾದರೂ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿದ್ದರೆ ಅಂಥವರ ಪಟ್ಟಿ ಕೊಡಿ ಎಂದು ಕೇಳಿದ್ದೇವೆ. ಅವರನ್ನು ವಾಪಾಸು ಕರೆಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News