ಪೊಲೀಸರಿಂದ ಲಾಠಿ ಚಾರ್ಜ್: ಅಲಿಗಢ ವಿವಿಯ ನೂರಾರು ವಿದ್ಯಾರ್ಥಿಗಳಿಗೆ ಗಾಯ

Update: 2019-12-16 08:03 GMT

 ಅಲಿಗಢ, ಡಿ.16: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ  ಅಲಿಗಢ ಮುಸ್ಲಿಂ ವಿವಿಯ ಕ್ಯಾಂಪಸ್ ಗೇಟ್‌ ಬಳಿ ರವಿವಾರ  ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ.

ಹಿಂಸಾಚಾರದ ಹಿನ್ನೆಲೆಯಲ್ಲಿ  ಜನವರಿ 5 ರವರೆಗೆ ವಿಶ್ವವಿದ್ಯಾಲಯವನ್ನು ಮುಚ್ಚುವುದಾಗಿ ಆಡಳಿತ ಮಂಡಳಿ ತಿಳಿಸಿದೆ

ರವಿವಾರ ತಡರಾತ್ರಿ ಪೊಲೀಸರು ಕ್ಯಾಂಪಸ್‌ಗೆ ಪ್ರವೇಶಿಸಿದ್ದಾರೆ ಮತ್ತು ಒಳಗಿನಿಂದ ಘರ್ಷಣೆಗಳು ವರದಿಯಾಗಿವೆ ಎಂದು  ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ರಿಜಿಸ್ಟ್ರಾರ್ ಅಬ್ದುಲ್ ಹಮೀದ್ ತಿಳಿಸಿದ್ದಾರೆ. "ಹಾಸ್ಟೆಲ್ ಗಳನ್ನು ಮುಚ್ಚಲಾಗಿದೆ " ಎಂದು ಅವರು ಹೇಳಿದರು.
ದಿಲ್ಲಿಯ  ಎಎಂಯು ವಿದ್ಯಾರ್ಥಿಗಳು ಸರ್  ಸಯ್ಯದ್  ಗೇಟ್ ಬಳಿ ಜಮಾಯಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ  ಹಿಂಸಾಚಾರ ಭುಗಿಲೆದ್ದಿತು. ಆಗ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಲು ಯತ್ನಿಸಿದರು ಎಂದು ತಿಳಿದು ಬಂದಿದೆ.
"ಸುಮಾರು 60 ವಿದ್ಯಾರ್ಥಿಗಳು ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಅಶ್ರುವಾಯುನಿಂದ  ಉಂಟಾದ ಆಘಾತ ಮತ್ತು ಕಣ್ಣಿನ ಗಾಯಗಳಿಂದ ಬಳಲುತ್ತಿದ್ದಾರೆ" ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನಿಸಾರ್ ಅಹ್ಮದ್ ತಿಳಿಸಿದ್ದಾರೆ.
ಗೇಟ್ ಬಳಿ ಕೆಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಎಎಂಯು ಪ್ರೊಕ್ಟರ್ ಪ್ರೊ.ಅಫಿಫುಲ್ಲಾ ಖಾನ್ ಹೇಳಿದ್ದಾರೆ. ತಲೆಗೆ ಪೆಟ್ಟು ಬಿದ್ದ ರಾಪಿಡ್ ಆಕ್ಷನ್ ಫೋರ್ಸ್‌ನ ಅಧಿಕಾರಿಯೊಬ್ಬರು ಹೆಲ್ಮೆಟ್ ಕೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿ,  ಲಾಠಿ ಪ್ರಹಾರ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸರು ಕ್ಯಾಂಪಸ್‌ನ ಎಲ್ಲಾ ಗೇಟ್‌ಗಳನ್ನು ಮುಚ್ಚಿದ್ದಾರೆ.
ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳನ್ನು  ಬಸ್‌ಗಳ ಮೂಲಕ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ರೈಲು ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಗುತ್ತಿದೆ ಎಂದರು.
ಆಗ್ರಾ ವಲಯ  ಎಡಿಜಿ,  ಅಜಯ್ ಆನಂದ್ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶಾಂತಿ ಕಾಪಾಡಲು ಅಗತ್ಯದ  ಎಲ್ಲ  ಕ್ರಮಗಳನ್ನು ತೆಗೆದುಕೊಳ್ಳಲಾಗುವುದು  ಎಂದು ತಿಳಿಸಿದ್ದಾರೆ.
ಲಕ್ನೋದ  ದಾರುಲ್ ಉಲೂಮ್ ನದ್ವಾ (ಇಸ್ಲಾಮಿಕ್ ಸೆಮಿನರಿ) ಹೊರಗೆ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಪ್ರವೀಣ್ ಕುಮಾರ್ "ಯುಪಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೇಳಿದರು.
ಏತನ್ಮಧ್ಯೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಎಂಯು ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಲಂಕಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು.
ಎಡ ಬೆಂಬಲಿತ ಎಐಎಸ್ಎ ವಿಭಾಗದ ಬಿಎಚ್‌ಯು ವಿದ್ಯಾರ್ಥಿಗಳು ಇತರ ವಿದ್ಯಾರ್ಥಿ ಸಂಘಗಳೊಂದಿಗೆ ಎಎಂಯು ವಿದ್ಯಾರ್ಥಿಗಳನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ  ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News