ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಪ್ರಕರಣ: ಉಚ್ಚಾಟಿತ ಬಿಜೆಪಿ ಶಾಸಕ ಸೆಂಗಾರ್ ದೋಷಿ

Update: 2019-12-16 16:50 GMT

ಹೊಸದಿಲ್ಲಿ,ಡಿ.16: 2017ರಲ್ಲಿ ಉತ್ತರಪ್ರದೇಶದ ಉನ್ನಾವೊದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ದೋಷಿಯೆಂದು ದಿಲ್ಲಿಯ ಜಿಲ್ಲಾ ನ್ಯಾಯಾಲಯ ಸೋಮವಾರ ಘೋಷಿಸಿದೆ.

ಭಾರತೀಯ ದಂಡಸಂಹಿತೆ ಹಾಗೂ ಪೊಸ್ಕೊ ಕಾಯ್ದೆಯಡಿ 53 ವರ್ಷದ ಸೆಂಗಾರ್‌ನನ್ನು ದೋಷಿಯೆಂದು ಪರಿಗಣಿಸಿದೆ. ನ್ಯಾಯಾಲಯವು ಬುಧವಾರ ಇತ್ತಂಡಗಳ ವಾದಗಳನ್ನು ಆಲಿಸಿದ ಬಳಿಕ ಸೆಂಗಾರ್‌ ಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಪೋಕ್ಸೊ ಕಾಯ್ದೆಯಡಿ ಅಪ್ರಾಪ್ತ ವಯಸ್ಕಳ ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳಿಗೆ ಜೀವಾವಧಿಯವರೆಗೆ ಗರಿಷ್ಠ ಶಿಕ್ಷೆ ವಿಧಿಸಬಹುದಾಗಿದೆ.

 ಆದಾಗ್ಯೂ ಸಹ ಆರೋಪಿ ಶಶಿಸಿಂಗ್ ನನ್ನು ಎಲ್ಲಾ ಆರೋಪಗಳಿಂದ ದಿಲ್ಲಿ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ದೋಷಮುಕ್ತಗೊಳಿಸಿದ್ದಾರೆ. ಅತ್ಯಾಚಾರ ನಡೆದ ಸಂದರ್ಭದಲ್ಲಿ ಸಂತ್ರಸ್ತೆಯು ಅಪ್ರಾಪ್ತ ವಯಸ್ಕಳಾಗಿದ್ದಳೆಂಬುದನ್ನು ಸಿಬಿಐ ಸಾಬೀತುಪಡಿಸಿದೆಯೆಂದು ಹೇಳಿದರು.

 ‘‘ ಸಂತ್ರಸ್ತೆಯ ಹೇಳಿಕೆಯು ಪ್ರಾಮಾಣಿಕವಾದುದಾಗಿತ್ತು ಹಾಗೂ ತಾನು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದೇನೆಂಬ ಆಕೆಯ ಹೇಳಿಕೆಯ ಕಳಂಕ ರಹಿತವಾಗಿದೆ. ಆಕೆ ಬೆದರಿಕೆಗೊಳಗಾಗಿದ್ದಳು ಹಾಗೂ ಭಯಭೀತಗೊಂಡಿದ್ದಳು. ಆಕೆ ಮಹಾನಗರ ಪ್ರದೇಶದವಳಾಗಿರದೆ ಗ್ರಾಮೀಣ ಬಾಲಕಿಯಾಗಿದ್ದಳು ಸೆನೆಗರ್ ಪ್ರಭಾವಿ ವ್ಯಕ್ತಿಯಾಗಿದ್ದ...,’’ ಎಂದು ನ್ಯಾಯಾಲಯವು ತೀರ್ಪು ಪ್ರಕಟಿಸುತ್ತಾ ತಿಳಿಸಿತು.

 ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಂತ್ರಸ್ತೆಯು ಪತ್ರ ಬರೆದ ಬಳಿಕ ಆಕೆಯ ಕುಟುಂಬದ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಸೆಂಗಾರ್‌ನ ಕೈವಾಡವಿರುವುದು ಗೋಚರಿಸಿದೆಯೆಂದು ನ್ಯಾಯಾಲಯ ಹೇಳಿದೆ.

    ಸಂತ್ರಸ್ತ ಯುವತಿಯು 2017ರಲ್ಲಿ ಅಪ್ರಾಪ್ತ ವಯಸ್ಕಳಾಗಿದ್ದು ಆಕೆಯನ್ನು ಸೆಂಗಾರ್ ಅಪಹರಿಸಿ ಅತ್ಯಾಚಾರವೆಸಗಿದ್ದ. ಈ ಪ್ರಕರಣದಲ್ಲಿ ನ್ಯಾಯಾಲಯವು ಸೆಂಗಾರ್‌ನ ಸಹಚರ ಶಶಿಸಿಂಗ್‌ನನ್ನು ಸಹ ಆರೋಪಿಯೆಂದು ಪರಿಗಣಿಸಿತ್ತು. ಉತ್ತರಪ್ರದೇಶದ ಬಂಗೆರ್‌ಮಾವ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿರುವ ಸೆಂಗಾರ್‌ ನನ್ನು ಬಿಜೆಪಿಯು 2019ರ ಆಗಸ್ಟ್‌ನಲ್ಲಿ ಉಚ್ಚಾಟಿಸಿತ್ತು.

 ನ್ಯಾಯಾಲಯವು ಆಗಸ್ಟ್ 9ರಂದು ಸೆಂಗಾರ್ ಹಾಗೂ ಶಶಿ ಸಿಂಗ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 120 ಬಿ ( ಕ್ರಿಮಿನಲ್ ಸಂಚು), 363 (ಅಪಹರಣ), 366 ( ಅಪಹರಣ ಅಥವಾ ವಿವಾಹಕ್ಕೆ ಮಹಿಳೆಯನ್ನು ಬಲವಂತಪಡಿಸಿರುವುದು), 376 (ಅತ್ಯಾಚಾರ) ಹಾಗೂ ಪೋಸ್ಕೊ ಕಾಯ್ದೆಯ ಇತರ ಕೆಲವು ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಿತ್ತು.

   ಈ ವರ್ಷದ ಜುಲೈ 28ರಂದು ಸಂತ್ರಸ್ತ ಯುವತಿಯು ನ್ಯಾಯವಾದಿಗಳೊಂದಿಗೆ ಪ್ರಯಾಣಿಸುತ್ತಿದ್ದ ಕಾರಿಗೆ, ಟ್ರಕ್ಕೊಂದು ಡಿಕ್ಕಿ ಹೊಡೆದು ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಈ ಅವಘಡದಲ್ಲಿ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಈ ಘಟನೆಯ ಹಿಂದೆ ಸೆಂಗಾರ್‌ನ ಕೈವಾಡವಿದೆಯೆಂದು ಯುವತಿಯ ಕುಟುಂಬ ಆಪಾದಿಸಿತ್ತು.

 2018ರ ಎಪ್ರಿಲ್ 3ರಂದು ಮಹಿಳೆಯ ತಂದೆಯನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧಿಸಲಾಗಿತ್ತು. ಕೆಲವು ದಿನಗಳ ನಂತರ , ಜುಲೈ 9ರಂದು ಆತ ನ್ಯಾಯಾಂಗ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.

  ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಶಾಸಕ, ಆತನ ಸಹೋದರ ಅತುಲ್ ಹಾಗೂ ಇತರ 9 ಮಂದಿಯ ವಿರುದ್ಧ ಕೊಲೆ ಹಾಗೂ ಇತರ ಆರೋಪಗಳನ್ನು ಹೊರಿಸಿತ್ತು.

  ಆರೋಪಿಗಳ ವಿರುದ್ಧ ತಾನು 2017ರ ಆಗಸ್ಟ್‌ನಲ್ಲಿ ದೂರು ನೀಡಿದಾಗ ಪೊಲೀ ಸರು ಅದನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರೆಂದು ಯುವತಿ ಆರೋಪಿಸಿದ್ದಳು. ಇದನ್ನು ಪ್ರತಿಭಟಿಸಿ ಆಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಮುಂದೆಯೇ ಆತ್ಮಾಹುತಿಗೈಯುವುದಾಗಿ ಬೆದರಿಕೆ ಹಾಕಿದ ಬಳಿಕ ಪ್ರಕರಣವು ಇಡೀ ದೇಶದ ಗಮನಸೆಳೆದಿತ್ತು. ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಈ ಅತ್ಯಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್, ಉನ್ನಾವೊ ನ್ಯಾಯಾಲಯದಿಂದ ದಿಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಆನಂತರ ಸುಪ್ರೀಂಕೋಟ್ ಆದೇಶದಂತೆ ಪ್ರಕರಣದ ವಿಚಾರಣೆಯನ್ನು ರಹಸ್ಯವಾಗಿ ನಡೆಸಲಾಗಿತ್ತು.

ಸಿಬಿಐ ತನಿಖೆ ವಿಳಂಬ: ನ್ಯಾಯಾಲಯದ ಅಸಮಾಧಾನ

ಆದಾಗ್ಯೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಲ್ಲಿ ಸಿಬಿಐ ವಿಳಂಬಿಸಿರುವ ಬಗ್ಗೆ ನ್ಯಾಯಾಲಯವು ಅಚ್ಚರಿ ವ್ಯಕ್ತಪಡಿಸಿತು ತನಿಖೆ ಹಾಗೂ ವಿಚಾರಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸಿಬಿಐ ಅನುಸರಿಸಲಿಲ್ಲವೆಂದು ಅದು ಅಸಮಾಧಾನ ವ್ಯಕ್ತಪಡಿಸಿತು.

ಈ ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪ ದಾಖಲಿಸಲು ಸಿಬಿಐ ಯಾಕೆ ಇಷ್ಟೊಂದು ವಿಳಂಬ ಮಾಡಿದೆ ಎಂದು ತಿಳಿಯುತ್ತಿಲ್ಲವೆಂದು ನ್ಯಾಯಾಧೀಶ ಧರ್ಮೇಂದ್ರ ಸಿಂಗ್ ಅಚ್ಚರಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News