ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಗೆ ಆಗ್ರಹಿಸಿ ತಮಟೆ ಚಳವಳಿ

Update: 2019-12-17 12:41 GMT

ಬೆಂಗಳೂರು, ಡಿ.17: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಸಮತಾವಾದ)ಯಿಂದ ನಗರದಲ್ಲಿಂದು ತಮಟೆ ಚಳವಳಿ ನಡೆಸಿದರು.

ಮಂಗಳವಾರ ನಗರದ ಕಾರ್ಪೋರೇಷನ್ ವೃತ್ತದ ಬಳಿಯಿರುವ ಬನ್ನಪ್ಪ ಪಾರ್ಕ್ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಕಾಲ್ನಡಿಗೆಯ ಮೂಲಕ ವಿಧಾನಸೌಧದವರೆಗೆ ತೆರಳಿ ಅಂಬೇಡ್ಕರ್‌ಗೆ ಮಾಲಾರ್ಪಣೆ ಮಾಡಿದರು. ಬಳಿಕ ನೃಪತುಂಗ ರಸ್ತೆಯ ಯವನಿಕದಲ್ಲಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಚ್.ಮಾರಪ್ಪ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.17 ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಲು ಆಯೋಗ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.

ರಾಜ್ಯದಲ್ಲಿ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇಂದಿಗೂ ದಲಿತ ಸಮುದಾಯದ ಅನೇಕರು ಗುಲಾಮರಂತೆ ಬದುಕುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನು ಮರು ಹಂಚಿಕೆ ಮಾಡಲು ಸರಕಾರಗಳು ಮನಸ್ಸು ಮಾಡುತ್ತಿಲ್ಲ ಎಂದು ಆಪಾದಿಸಿದರು.

ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ದಲಿತರ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ. ಕೂಲಿನಾಲಿ ಮಾಡಿಕೊಂಡು ನಿಕೃಷ್ಟ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಉತ್ಪಾದನಾ ವಲಯದಲ್ಲಿಯೂ ಅವರಿಗೆ ಆದ್ಯತೆ ಇಲ್ಲ. ಹೀಗಾಗಿ, ಮೀಸಲಾತಿ ಹೆಚ್ಚಿಸುವುದು ಅನಿವಾರ್ಯ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ, ಎಲ್ಲ ಸರಕಾರಗಳು ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿವೆ. ಆದರೆ, ಈಗ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರ ನೇತೃತ್ವದಲ್ಲಿ ಮತ್ತೊಂದು ಸಮಿತಿ ಮಾಡಿದ್ದಾರೆ. ದಲಿತರನ್ನು ದಿಕ್ಕು ತಪ್ಪಿಸುವಲ್ಲಿಯೇ ಆಳುವ ವರ್ಗ ನಿರತವಾಗಿದೆ ಎಂದು ಆಪಾದಿಸಿದರು.

ನಾಗಮೋಹನ್‌ ದಾಸ್‌ರ ವರದಿಯಲ್ಲಿ ಜಾತಿ ಆಧಾರಿತವಾಗಿ ಮೀಸಲಾತಿ ಹಂಚಿಕೆ ಮಾಡುವ ಬದಲಿಗೆ, ಜನಸಂಖ್ಯೆವಾರು ಮೀಸಲಾತಿ ಹಂಚಿಕೆ ಮಾಡಬೇಕು. ಆ ಮೂಲಕ ಇದುವರೆಗೂ ಮೀಸಲಾತಿಯನ್ನೇ ಪಡೆಯದ ಅನೇಕ ಜಾತಿಗಳಿಗೂ ಅದರ ಸೌಲಭ್ಯ ಪಡೆಯುವಂತಾಗುತ್ತಾರೆ ಎಂದು ಅವರು ನುಡಿದರು.

ಮೀಸಲಾತಿ ದಲಿತ ಸಮುದಾಯದವರಿಗೆ ನೀಡಿದ ಭಿಕ್ಷೆಯಲ್ಲ. ನಮ್ಮ ಸಂವಿಧಾನ ಬದ್ಧವಾದ ಹಕ್ಕು. ಮೀಸಲಾತಿ ಇದ್ದುದರಿಂದಲೇ ದಲಿತರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಉಪಪ್ರಧಾನಿ, ಸಚಿವರು, ಶಾಸಕರಾಗಿ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಸಾಧ್ಯವಾಗಿದೆ. ಆಯೋಗವು ಎಲ್ಲ ವಿಭಾಗಗಳಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿ, ನಂತರ ಸರಕಾರಕ್ಕೆ ವರದಿ ಸಲ್ಲಿಸಬೇಕಿದೆ ಎಂದು ಮಾರಪ್ಪ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಘಟನಾ ಅಧ್ಯಕ್ಷ ಮುನಿಭೈರಪ್ಪ, ಉಪಾಧ್ಯಕ್ಷ ಟಿ.ಚಂದ್ರಪ್ಪ, ಕಾರ್ಯದರ್ಶಿ ಎಸ್.ರಮೇಶ್ ಸೇರಿದಂತೆ ಪದಾಧಿಕಾರಿಗಳು, ಯುವಕರು ಹಾಗೂ ಮಹಿಳಾ ನಾಯಕಿಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News