ಮ್ಯಾನ್ಮಾರ್: ದೋಣಿಯಲ್ಲಿ ಪರಾರಿಯಾಗುತ್ತಿದ್ದ 173 ರೊಹಿಂಗ್ಯಾ ಮುಸ್ಲಿಮರ ಬಂಧನ

Update: 2019-12-17 16:41 GMT

ಯಾಂಗನ್, ಡಿ. 17: ಮ್ಯಾನ್ಮಾರ್‌ನ ದಕ್ಷಿಣ ಕರಾವಳಿಯಲ್ಲಿ ದೋಣಿಯೊಂದರಲ್ಲಿ ತೆರಳುತ್ತಿದ್ದ 173 ರೊಹಿಂಗ್ಯಾ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹಿಂಸೆಗೆ ಬೆದರಿ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಿಂದ ಸಮುದ್ರ ಮಾರ್ಗ ಮೂಲಕ ಪರಾರಿಯಾಗುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಈ ಘಟನೆ ವರದಿಯಾಗಿದೆ.

ಟನಿಂತಾರ್ಯಿ ವಿಭಾಗದ ಕೌತಾವುಂಗ್ ಟೌನ್‌ಶಿಪ್ ಕರಾವಳಿಯಲ್ಲಿ ದೋಣಿಯಲ್ಲಿ ತೆರಳುತ್ತಿದ್ದ ರೊಹಿಂಗ್ಯಾ ಗುಂಪನ್ನು ಮ್ಯಾನ್ಮಾರ್ ನೌಕಾಪಡೆ ರವಿವಾರ ತಡೆದು ಬಂಧಿಸಿದೆ ಎಂದು ಸೇನಾ ವಕ್ತಾರ ಟುನ್ ಟುನ್ ನಯಿ ತಿಳಿಸಿದರು. ಬಂಧಿತರಲ್ಲಿ 22 ಮಕ್ಕಳೂ ಇದ್ದಾರೆ.

‘‘ಸಮುದ್ರದಲ್ಲಿ ಸಂಶಯಾಸ್ಪದ ದೋಣಿಯೊಂದರಲ್ಲಿ ನಮ್ಮ ನೌಕಾ ಪಡೆಯು ಅವರನ್ನು ಪತ್ತೆಹಚ್ಚಿತು’’ ಎಂದು ಅವರು ‘ರಾಯ್ಟರ್ಸ್’ಗೆ ಫೋನ್‌ನಲ್ಲಿ ಹೇಳಿದರು. ‘‘ಇನ್ನು ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ’’ ಎಂದರು.

2017ರ ಉತ್ತರಾರ್ಧದಲ್ಲಿ ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7.50 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ. ಸೇನಾ ಕಾರ್ಯಾಚರಣೆಯ ವೇಳೆ ನೂರಾರು ಅಲ್ಪಸಂಖ್ಯಾತ ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಲಾಗಿದೆ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ದಮನ ಕಾರ್ಯಾಚರಣೆಯನ್ನು ವಿಶ್ವಸಂಸ್ಥೆಯು ‘ಜನಾಂಗೀಯ ನಿರ್ಮೂಲನ’ ಎಂಬುದಾಗಿ ಬಣ್ಣಿಸಿದೆ.

ಈ ಹತ್ಯಾಕಾಂಡದ ವಿರುದ್ಧ ಗ್ಯಾಂಬಿಯ ದೇಶವು ನೆದರ್‌ಲ್ಯಾಂಡ್‌ನ ದ ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ ಹಾಗೂ ಅದರ ವಿಚಾರಣೆಯು ಪ್ರಸಕ್ತ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಇನ್ನೂ 6 ಲಕ್ಷ ರೊಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ

ಬೌದ್ಧ ಬಹುಸಂಖ್ಯಾತ ದೇಶವಾಗಿರುವ ಮ್ಯಾನ್ಮಾರ್‌ನಲ್ಲಿ ಇನ್ನೂ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರು ವಾಸವಾಗಿದ್ದಾರೆ. ಆದರೆ ಅವರ ಚಟುವಟಿಕೆಗಳು ಶಿಬಿರಗಳು ಮತ್ತು ರಖೈನ್ ರಾಜ್ಯದ ಹಳ್ಳಿಗಳಿಗೆ ಸೀಮಿತವಾಗಿವೆ. ಅಲ್ಲಿ ಅವರು ಮುಕ್ತವಾಗಿ ಓಡಾಡುವಂತಿಲ್ಲ, ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವಂತಿಲ್ಲ ಹಾಗೂ ಶಿಕ್ಷಣ ಹೊಂದುವಂತಿಲ್ಲ.

ಹಲವು ವರ್ಷಗಳಿಂದ ಗಡಿಯ ಎರಡೂ ಕಡೆಗಳಲ್ಲಿರುವ ರೊಹಿಂಗ್ಯಾ ಮುಸ್ಲಿಮರು ನವೆಂಬರ್‌ನಿಂದ ಮಾರ್ಚ್‌ವರೆಗಿನ ಸಮುದ್ರ ಶಾಂತವಾಗಿರುವ ಅವಧಿಯಲ್ಲಿ ಕಳ್ಳಸಾಗಾಣಿಕೆದಾರರ ದೋಣಿಗಳನ್ನು ಏರಿ ಥಾಯ್ಲೆಂಡ್ ಮತ್ತು ಮಲೇಶ್ಯಗಳಿಗೆ ಅಪಾಯಕಾರಿ ಪ್ರಯಾಣಗಳನ್ನು ಕೈಗೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News