ನಿರ್ಭಯಾ ಅತ್ಯಾಚಾರ ಪ್ರಕರಣ: ಮರು ಪರಿಶೀಲನಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ

Update: 2019-12-17 18:32 GMT

ಹೊಸದಿಲ್ಲಿ, ಡಿ. 17: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣ ದಂಡನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ದೋಷಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ ಮನವಿಯ ಆಲಿಕೆಯಿಂದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮಂಗಳವಾರ ಹಿಂದೆ ಸರಿದಿದ್ದಾರೆ.

ಮರು ಪರಿಶೀಲನಾ ಅರ್ಜಿಯನ್ನು ಇನ್ನೊಂದು ಸೂಕ್ತ ಪೀಠ ಆಲಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಆರ್. ಭಾನುಮತಿ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ಸ್ಪಷ್ಟವಾಗಿ ಹೇಳಿದೆ.

ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿಯ ಪರವಾಗಿ ಈ ಹಿಂದೆ ನ್ಯಾಯಾಲಯಕ್ಕೆ ತನ್ನ ಸಂಬಂಧಿ ಹಾಜರಾಗಿದ್ದರು. ಆದುದರಿಂದ ಈ ಮರು ಪರಿಶೀಲನಾ ಅರ್ಜಿಯನ್ನು ಇತರ ಪೀಠ ಆಲಿಕೆ ನಡೆಸುವುದು ಸೂಕ್ತ ಎಂದು ಎಸ್.ಎ. ಬೊಬ್ಡೆ ಪ್ರತಿಪಾದಿಸಿದ್ದಾರೆ.

ಈ ಪ್ರಕರಣ ರಾಜಕೀಯ ಹಾಗೂ ಮಾಧ್ಯಮ ಒತ್ತಡಕ್ಕೆ ಸಿಲುಕಿದೆ ಹಾಗೂ ದೋಷಿಗೆ ಗಂಭೀರ ಅನ್ಯಾಯವಾಗಿದೆ ಎಂದು ಅಕ್ಷಯ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಎ.ಪಿ. ಸಿಂಗ್ ಪ್ರತಿಪಾದಿಸಿದರು.

ದಕ್ಷಿಣ ದಿಲ್ಲಿಯ ಮುನಿರ್ಕಾದಿಂದ ತನ್ನ ಗೆಳೆಯನೊಂದಿಗೆ ಬಸ್ ಹತ್ತಿದ 23 ವರ್ಷದ ನಿರ್ಭಯಾರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪವನ್ ಗುಪ್ತಾ, ಅಕ್ಷಯ್ ಠಾಕೂರ್, ವಿನಯ್ ಶರ್ಮಾ ಹಾಗೂ ಮುಖೇಶ್ ಸಿಂಗ್‌ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News