ರಾಜ್ಯದಲ್ಲಿ ಪ್ರತಿ ಐದು ಗಂಟೆಗೊಮ್ಮೆ ದಲಿತರ ಮೇಲೆ ದೌರ್ಜನ್ಯ

Update: 2019-12-18 14:25 GMT

ಬೆಂಗಳೂರು, ಡಿ.18: ರಾಜ್ಯದಲ್ಲಿ 2018 ನೆ ಸಾಲಿನಲ್ಲಿ 1751 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಪ್ರತಿ ದಿನಕ್ಕೆ 4 ಅಥವಾ 5 ದೌರ್ಜನ್ಯ ಪ್ರಕರಣಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ನಡೆಯುತ್ತಿವೆ. ಅಂದರೆ ಪ್ರತಿ ಐದು ಗಂಟೆಗೊಂದು ದೌರ್ಜನ್ಯ ನಡೆಯುತ್ತಿದೆ.

ಬುಧವಾರ ನಗರದ ಡಾ.ಬಿ.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ದನ ಸಮಿತಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ ಹಾಗೂ 2018ನೆ ಸಾಲಿನ ವರದಿ ಬಿಡುಗಡೆ ಸಮಾರಂಭದಲ್ಲಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಾಲಿನಲ್ಲಿ ಒಟ್ಟು 164 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಪ್ರತಿ ಎರಡು ದಿನಕ್ಕೊಂದು ಎಸ್ಸಿ-ಎಸ್ಟಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಇದೇ ರೀತಿ 122 ಕೊಲೆ ಹಾಗೂ ಕೊಲೆ ಪ್ರಯತ್ನ ಪ್ರಕರಣಗಳು ದಾಖಲಾಗಿದ್ದು, ಪ್ರತಿ ಮೂರು ದಿನಕ್ಕೊಮ್ಮೆ ಒಬ್ಬರ ಮೇಲೆ ಕೊಲೆ ಯತ್ನ ನಡೆಯುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಒಟ್ಟು ವರದಿಯಾದ ಪ್ರಕರಣಗಳಲ್ಲಿ ಬೆಂಗಳೂರು ನಗರ ಅತಿ ಹೆಚ್ಚು(163) ದೌರ್ಜನ್ಯ ಪ್ರಕರಣಗಳು ನಡೆದಿವೆ. ಕಳೆದ 7 ವರ್ಷಗಳಿಂದಲೂ ನಗರ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಕೊಡಗು ಎರಡನೆ ಸ್ಥಾನದಲ್ಲಿದೆ. ಧಾರವಾಡ, ಬಿಜಾಪುರ, ಗುಲಬರ್ಗಾ, ಬೀದರ್, ರಾಯಚೂರು ಮೂರನೇ ಸ್ಥಾನದಲ್ಲಿ, ಯಾದಗಿರಿ, ಕೊಪ್ಪಳ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಗೋಕಾಕ ನಾಲ್ಕನೇ ಸ್ಥಾನದಲ್ಲಿವೆ. ಉಳಿದಂತೆ ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಹಾವೇರಿ, ಉಡುಪಿ ಕೊನೆಯ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

ಪ್ರಸಕ್ತ ಸಾಲಿನಲ್ಲಿ ವರದಿಯಾದ 164 ಅತ್ಯಾಚಾರ ಪ್ರಕರಣಗಳಲ್ಲಿ ಅತಿ ಹೆಚ್ಚು(19) ಮೈಸೂರು ಜಿಲ್ಲೆಯಲ್ಲಿ ನಡೆದಿವೆ. ಅಂತೆಯೇ 122 ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿವೆ.

ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಒಟ್ಟು 1087 ಪ್ರಕರಣಗಳಲ್ಲಿ 46 ಪ್ರಕರಣಗಳಿಗೆ ಅಷ್ಟೇ ಶಿಕ್ಷೆಯಾಗಿದ್ದು, 874 ಕೇಸುಗಳು ಖುಲಾಸೆಗೊಂಡಿವೆ. ಉಳಿದ 167 ಪ್ರಕರಣಗಳು ಇನ್ನಿತರೆ ರೀತಿಯಲ್ಲಿ ವಿಲೇವಾರಿಗೊಂಡಿವೆ. ಈ ಸಾಲಿನಲ್ಲಿಯೂ ಶೇ.4.23 ರಷ್ಟು ಶಿಕ್ಷೆಯ ಪ್ರಮಾಣವಿದ್ದು, ಖುಲಾಸೆಗೊಂಡ ಪ್ರಕರಣಗಳ ಪ್ರಮಾಣ ಶೇ.80.40 ರಷ್ಟಿದೆ.

ನ್ಯಾಯಾಲಯಗಳಲ್ಲಿ ಬಿ ವರದಿಯಲ್ಲಿ ಅಂತ್ಯಗೊಂಡಿರುವ ಪ್ರಕರಣಗಳ ಪ್ರಮಾಣ ಶೇ.4.10 ರಷ್ಟಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಶಿಕ್ಷೆಯ ಪ್ರಮಾಣ ಶೂನ್ಯವಿದೆ. ಅಲ್ಲದೆ, ಈ ಸಾಲಿನಲ್ಲಿ ವರದಿಯಾದ ಒಟ್ಟು 1751 ದೌರ್ಜನ್ಯ ಪ್ರಕರಣಗಳಲ್ಲಿ ಶೇ.68.81 ರಷ್ಟು ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ ಎಂದು ಬಿಡುಗಡೆಯಾದ ವರದಿಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಸರಕಾರಗಳಿಗೆ ದೌರ್ಜನ್ಯ ಮಾಡುವವರನ್ನು ಶಿಕ್ಷಿಸುವ ಇಚ್ಛಾಶಕ್ತಿ ಕಡಿಮೆಯಿದೆ. ಶಾಸಕರು ಹಾಗೂ ಸಚಿವರೇ ಅಪರಾಧ ಮಾಡಿದವರ ಪರವಾಗಿ ನಿಲ್ಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಷ್ಟು ಕಾನೂನು ಮಾಡಿದರೂ ಅದನ್ನು ಜಾರಿ ಮಾಡದಿದ್ದರೆ ಅದು ವ್ಯರ್ಥ ಎಂದರು.

ಪರಿಶಿಷ್ಟ ಸಮುದಾಯವು ಆರ್ಥಿಕವಾಗಿ ಸಬಲರಾಗಬೇಕು. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದ ಅವರು, ನಮ್ಮ ರಕ್ಷಣೆಗೆ ಪೊಲೀಸರ ಮೇಲೆ ಅವಲಂಬಿತರಾಗದೆ, ನಾವೇ ರಕ್ಷಿಸಿಕೊಳ್ಳಬೇಕಿದೆ. ದೌರ್ಜನ್ಯ ಮಾಡಿದವರ ವಿರುದ್ಧ ಹೋರಾಡಬೇಕು. ಪೊಲೀಸರು ರಕ್ಷಿಸಲಾಗದ ಕಾನೂನನ್ನು ನಾವು ರಕ್ಷಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಮಿತಿಯ ಅಧ್ಯಕ್ಷೆ ಪಿ.ಯಶೋಧ, ಎಸ್‌ಇಪಿ/ಟಿಎಸ್‌ಪಿ ಸಮಿತಿ ಸಲಹೆಗಾರ ಡಾ.ಇ.ವೆಂಕಟಯ್ಯ, ಉಪನ್ಯಾಸಕಿ ಡಾ.ಎಸ್.ಮಂಗಳಮೂರ್ತಿ ಸೇರಿದಂತೆ ಹಲವರಿದ್ದರು.

ಹಕ್ಕೊತ್ತಾಯಗಳು:

- ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.

- ಶೂನ್ಯ ಶಿಕ್ಷೆ ವಿಧಿಸಿರುವ 10 ಎಸ್‌ಪಿಪಿ ಅಧಿಕಾರಿಗಳನ್ನು ಬದಲಾಯಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

- ಪೊಲೀಸ್ ಸ್ಟೇಷನ್ ಮಟ್ಟದಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯಗಳನ್ನು ರಾಜಿ ಮಾಡುತ್ತಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕು.

- ಪೊಲೀಸ್ ಸ್ಟೇಷನ್ ಮಟ್ಟದಲ್ಲಿ ನಡೆಸಬೇಕಾದ ದಲಿತ ದಿನವನ್ನು ತಪ್ಪದೇ ಕಾರ್ಯರೂಪಕ್ಕೆ ತರಬೇಕು.

- ಡಿವಿಎಂಸಿ ಸಭೆಗಳು ವರ್ಷದಲ್ಲಿ ನಿಗದಿತ ಅವಧಿಯಲ್ಲಿ ನಡೆಯುವಂತೆ ಕಡ್ಡಾಯಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News