ರಾಜಸ್ಥಾನ ಸರ್ಕಾರದ ವರ್ಷಾಚರಣೆ: ಗೆಹ್ಲೋಟ್ ಜನತೆಗೆ ನೀಡಿದ ಕೊಡುಗೆಯೇನು ಗೊತ್ತೇ?

Update: 2019-12-19 03:23 GMT

ಜೈಪುರ, ಡಿ.19: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದ ಬಡಜನತೆಗೆ ಸರ್ಕಾರ ವಿಶೇಷ ಕೊಡುಗೆ ನೀಡಿದೆ. ಬಡವರು ಹಾಗೂ ದುರ್ಬಲ ವರ್ಗದವರಿಗೆ ತಮ್ಮ ಮನೆ ಹಾಗೂ ಮೊಹಲ್ಲಾಗಳ ಬಳಿಯೇ ಉಚಿತ ಚಿಕಿತ್ಸೆ ನೀಡುವ 'ಜನತಾ ಕ್ಲಿನಿಕ್‌'ಗೆ ಮುಖ್ಯಮಂತ್ರಿ ಬುಧವಾರ ಚಾಲನೆ ನೀಡಿದ್ದಾರೆ.

ಕೊಳಗೇರಿ ನಿವಾಸಿಗಳಿಗೆ ಉಚಿತ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಪ್ರಥಮ ಜನತಾ ಕ್ಲಿನಿಕ್‌ಗೆ ಗೆಹ್ಲೋಟ್ ಮಾಳವೀಯ ನಗರದ ವಾಲ್ಮೀಕಿ ಬಸ್ತಿಯಲ್ಲಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಜೈಪುರದಲ್ಲಿ ಇಂಥ 12 ಜನತಾ ಕ್ಲಿನಿಕ್‌ಗಳು ಆರಂಭವಾಗಲಿವೆ. ಇಲ್ಲಿ ಜನ ಉಚಿತ ಔಷಧಿ ಹಾಗೂ ವೈದ್ಯಕೀಯ ತಪಾಸಣೆ ಸೌಲಭ್ಯ ಪಡೆಯಲಿದ್ದಾರೆ. ಎರಡು ಹಾಗೂ ಮೂರನೇ ಹಂತದಲ್ಲಿ ಇತರ ಕಡೆಗಳಲ್ಲೂ ಜನತಾ ಕ್ಲಿನಿಕ್ ತೆರೆಯಲಾಗುವುದು ಎಂದು ಸಿಎಂ ಹೇಳಿದರು.

ಗುಣಮಟ್ಟದ ಆರೋಗ್ಯ ಸೇವೆ ನಗರದ ಬಡವರಿಗೆ ಹಾಗೂ ಕೊಳಗೇರಿ ನಿವಾಸಿಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ ಎಂದು ಗೆಹ್ಲೋಟ್ ವಿವರಿಸಿದರು. ಈ ಉದ್ದೇಶಕ್ಕಾಗಿ ನಿರೋಗಿ ರಾಜಸ್ಥಾನ್ ಯೋಜನೆಗೆ ಸರ್ಕಾರ ಚಾಲನೆ ನೀಡಲಿದೆ ಎಂದರು. ಜನತಾ ಕ್ಲಿನಿಕ್‌ಗಳು ಮೂರು ತಿಂಗಳ ಕಾಲ ಯಶಸ್ವಿಯಾಗಿ ಮುಂದುವರಿದ ಬಳಿಕ ಖಾಸಗಿ ಕಂಪೆನಿಗಳಲ್ಲಿ ವೆಚ್ಚವಾಗದೇ ಉಳಿದಿರುವ ಸಿಎಸ್‌ಆರ್ ನಿಧಿಯನ್ನು ಈ ಉದ್ದೇಶಕ್ಕೆ ಒದಗಿಸಲು ಸರ್ಕಾರ ನಿರ್ಧರಿಸಿದೆ.
ಪ್ರಮುಖ ಆಸ್ಪತ್ರೆ ಅಥವಾ ಆರೋಗ್ಯ ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಈ ಕ್ಲಿನಿಕ್ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News