ಕರ್ನಾಟಕ ಪೊಲೀಸರಿಂದ ಸೆಕ್ಷನ್ 144ರ ದುರ್ಬಳಕೆ: ಪಿಎಫ್ಐ

Update: 2019-12-19 08:26 GMT

ಬೆಂಗಳೂರು, ಡಿ.19: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಸೆಕ್ಷನ್ 144 ಅನ್ನು ಹೇರಲಾಗಿದೆ. ಇದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಪಡಿಸುವಿಕೆ ಮತ್ತು ಸಭೆ ಸೇರುವ ಹಾಗೂ ಸಂಘಟಿಸುವ ಸ್ವಾತಂತ್ರ್ಯದ ಹಕ್ಕನ್ನು ನಿಗ್ರಹಿಸುವ ಷಡ್ಯಂತ್ರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಖಂಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದ  ಫ್ಯಾಶಿಸ್ಟ್ ಸರಕಾರದ ಮೂಲಕ ತರಲಾದ ಸಿಎಎ ಮತ್ತು ಎನ್ ಆರ್ ಸಿಯ ವಿರುದ್ಧ ಹೆಚ್ಚುತ್ತಿರುವ ಆಂದೋಲನಗಳ ಧ್ವನಿಯನ್ನು ತಡೆಯುವ ಸ್ಪಷ್ಟ ಪ್ರಯತ್ನವಾಗಿದೆ. ಈ ರೀತಿಯ ಕಾನೂನು ದುರ್ಬಳಕೆಯು ಸರ್ವಾಧಿಕಾರ ಆಡಳಿತದ ಲಕ್ಷಣಗಳಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಭೀರ ಅಪಾಯವನ್ನು ಎದುರಿಸುತ್ತಿರುವುದರ ಸೂಚನೆಯಾಗಿದೆ.

ದೇಶಾದ್ಯಂತ ಹೆಚ್ಚುತ್ತಿರುವ  ಪ್ರತಿಭಟನೆ, ಜನಾಂದೋಲನದಿಂದಾಗಿ ಫ್ಯಾಶಿಷ್ಟ್ ಆಡಳಿತವು ತನ್ನ ಸರ್ವಾಧಿಕಾರದ ವರ್ತನೆಯನ್ನು ಪ್ರದರ್ಶಿಸುತ್ತಿದೆ.

ಫ್ಯಾಶಿಷ್ಟ್ ಸರಕಾರದ‌ ಅಧೀನದಲ್ಲಿ ಪೊಲೀಸರು ಕೈಗೊಂಬೆಗಳಾಗಿದ್ದಾರೆ ಮತ್ತು ಅಸಾಂವಿಧಾನಿಕ ಸಿಎಎ‌ ವಿರುದ್ಧದ ಶಾಂತಿಯುತ ಪ್ರತಿಭಟನೆಯನ್ನು ತಡೆಯಲು ಅವರು ತಮ್ಮ ಸರ್ವಾಧಿಕಾರಿಯ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದಾಗಿದೆ. ಸಂವಿಧಾನವನ್ನು ರಕ್ಷಿಸುವುದು ಪೊಲೀಸರ‌ ಕರ್ತವ್ಯವೇ ಹೊರತು, ಜನರನ್ನು ಬೆದರಿಸುವುದಲ್ಲ.

ನಾವು ಈಗಲೂ ಪ್ರಜಾಸತ್ತಾತ್ಮಕ ದೇಶದಲ್ಲಿ ಜೀವಿಸುತ್ತಿದ್ದೇವೆ ಮತ್ತು ಪ್ರತಿಭಟನೆ ಎಂಬ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲಿದ್ದೇವೆ  ಎಂಬ ವಿಚಾರವನ್ನು ಬೆಂಗಳೂರು ಪೊಲೀಸರಿಗೆ  ನೆನಪಿಸುತ್ತಿದ್ದೇವೆ ಎಂದು ಮುಹಮ್ಮದ್ ಶಾಕಿಬ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News