ಇಂಟರ್‌ನೆಟ್ ಸ್ಥಗಿತದಿಂದ ವ್ಯಾಪಾರ ವಹಿವಾಟಿಗೆ ಆಗಿರುವ ಹಾನಿಯೆಷ್ಟು ಗೊತ್ತೇ?

Update: 2019-12-22 04:25 GMT

ಹೊಸದಿಲ್ಲಿ, ಡಿ.22: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ವೇಳೆ ಹಲವೆಡೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಭಾರತದ ಇಂಟರ್‌ನೆಟ್ ಆಧರಿತ ಆರ್ಥಿಕತೆ ಅಕ್ಷರಶಃ ಕುಸಿದಿದೆ. ದೊಡ್ಡಸಂಖ್ಯೆಯ ಇಂಟರ್‌ನೆಟ್ ಆಧರಿತ ಸೇವೆ ಒದಗಿಸುವವರು ಇರುವ ಉತ್ತರ ಪ್ರದೇಶ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ವಹಿವಾಟಿಗೆ ಹೆಚ್ಚಿನ ಪ್ರಮಾಣದಲ್ಲಿ ಧಕ್ಕೆಯುಂಟಾಗಿದೆ. ಉತ್ತರ ಪ್ರದೇಶದ 24 ಜಿಲ್ಲೆಗಳಲ್ಲಿ ಹಾಗೂ ದೆಹಲಿಯ ವಿವಿಧೆಡೆ ಒಂದು ವಾರದಿಂದ ಇಂಟರ್‌ನೆಟ್ ಸೇವೆ ರದ್ದಾಗಿದೆ.

ಈ ಪ್ರದೇಶಗಳಲ್ಲಿ ಆಹಾರ ಸರಬರಾಜು ಆ್ಯಪ್ ವಹಿವಾಟು ಶೇಕಡ 10-20ರಷ್ಟು ಕುಸಿದಿದೆ. ಹಲವು ಆನ್‌ಲೈನ್ ಚಿಲ್ಲರೆ ಮತ್ತು ಇ-ದಿನಸಿ ವಹಿವಾಟಿನ ಸರಬರಾಜು ಸರಣಿ ಕೂಡಾ ಅಸ್ತವ್ಯಸ್ತಗೊಂಡಿದೆ. ಈ ಪ್ರದೇಶದಲ್ಲಿ ಬಾಡಿಗೆ ಸವಾರಿ ಸೇವೆ ಕೂಡಾ ಅಕ್ಷರಶಃ ಸ್ತಬ್ಧವಾಗಿದೆ.

ಬಹುತೇಕ ಇ ಸ್ಟಾರ್ಟಪ್ ಕಂಪನಿಗಳಿಗೆ ಇಂಟರ್‌ನೆಟ್ ಆಧಾರವಾಗಿದೆ. "ಇಂಥ ತುರ್ತು ಸ್ಥಿತಿಯನ್ನು ಎದುರಿಸಲು ನಾವು ಸಜ್ಜಾಗಿಲ್ಲ" ಎಂದು ಲಾಜಿಸ್ಟಿಕ್ಸ್ ಸ್ಟಾರ್ಟ್‌ಅಪ್ ಒಂದರ ಸಂಸ್ಥಾಪಕರು ಹೇಳುತ್ತಾರೆ.

ಉದ್ಯಮ ಪಂಡಿತರ ಪ್ರಕಾರ ದೇಶದ 30-40% ಇ-ಆಧರಿತ ವಹಿವಾಟುಗಳು ಗಲಭೆಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿವೆ. ಗಾಝಿಯಾಬಾದ್‌ನಲ್ಲಿ ಇಂಟರ್‌ನೆಟ್ ಸ್ಥಗಿತದಿಂದಾಗಿ ಉಬೆರ್ ಹಾಗೂ ಓಲಾ ಮೂಲಕ ಕಾರು ಬುಕ್ಕಿಂಗ್ ಮಾಡಲು ಕೂಡಾ ಪರದಾಡಬೇಕಾಯಿತು. ಇದರಿಂದಾಗಿ ದೆಹಲಿಯಿಂದ ಗಾಝಿಯಾಬಾದ್‌ಗೆ ತೆರಳಲು ಹಲವು ಚಾಲಕರು ನಿರಾಕರಿಸಿದರು. ಹಿಂಸಾಚಾರ ಹಾಗೂ ವಾಹನಕ್ಕೆ ಧಕ್ಕೆಯಾಗುವ ಭೀತಿಯಿಂದ ಹಲವು ಚಾಲಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸಲಿಲ್ಲ.

ಪ್ರತಿದಿನ 20 ಲಕ್ಷ ಆರ್ಡರ್‌ಗಳನ್ನು ನಿರ್ವಹಿಸುವ ಆಹಾರ ಸರಬರಾಜು ಆ್ಯಪ್‌ಗಳಾದ ಝೊಮ್ಯಾಟೊ, ಸ್ವಿಗ್ಗಿ ಹಾಗು ಉಬೆರ್‌ ಈಟ್ಸ್ ವಹಿವಾಟಿಗೂ ಹೊಡೆತ ಬಿದ್ದಿದೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ದಿನಕ್ಕೆ ಸುಮಾರು 60 ಸಾವಿರ ಆರ್ಡರ್‌ಗಳು ಬರುತ್ತವೆ. ಈ ಮೂರೂ ಸಂಸ್ಥೆಗಳ ವಹಿವಾಟು ಶುಕ್ರವಾರದಿಂದೀಚೆ ಅಕ್ಷರಶಃ ಶೂನ್ಯವಾಗಿದೆ. ಇದು ನಮ್ಮ ಒಟ್ಟು ವಹಿವಾಟು ಶೇ.10-20ದಷ್ಟು ಕುಸಿಯಲು ಕಾರಣವಾಗಿದೆ ಎಂದು ಬಿರಿಯಾನಿ ಬೈ ಕಿಲೋ ಸಹಸಂಸ್ಥಾಪಕ ವಿಶಾಲ್ ಜಿಂದಾಲ್ ಹೇಳಿದ್ದಾರೆ. ಈ ಸಂಸ್ಥೆಗೆ ಮೂರನೇ ಎರಡರಷ್ಟು ಆರ್ಡರ್‌ಗಳು ಆನ್‌ಲೈನ್ ಮೂಲಕ ಬರುತ್ತವೆ.

ದಿನಕ್ಕೆ 20ರಿಂದ 25 ಸಾವಿರ ಆರ್ಡರ್ ಪಡೆಯುವ ದಿನಸಿ ಸಾಮಗ್ರಿ ಪೂರೈಕೆ ಆ್ಯಪ್‌ಗಳ ವಹಿವಾಟಿಗೂ ಹೊಡೆತ ಬಿದ್ದಿದೆ. ಗುವಾಹತಿ ಮತ್ತು ಲಕ್ನೋ ಅತ್ಯಂತ ನಷ್ಟಕ್ಕೀಡಾದ ನಗರಗಳು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News