ನಾವು ಪ್ರಚೋದನಕಾರಿ ಭಾಷಣ ಮಾಡಿದರೆ 'ಅವರು' ಉಳಿಯುವುದಿಲ್ಲ: ಸಂಸದ ತೇಜಸ್ವಿ ಸೂರ್ಯ

Update: 2019-12-22 10:30 GMT

ಬೆಂಗಳೂರು, ಡಿ.21: "ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವ, ಬೀದಿಬದಿ ಪಂಕ್ಚರ್ ಹಾಕುವವರು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದಿತ ಹೇಳಿಕೆ ನೀಡಿದ್ದಾರೆ.

ರವಿವಾರ ಇಲ್ಲಿನ ಪುರಭವನ ಮುಂಭಾಗ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಂಯೋಜನೆ ಮಾಡುವುದಿಲ್ಲ ಎಂದರು.

ನಾವು 5 ಶತಕೋಟಿ ರೂಪಾಯಿಯ ಅರ್ಥ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿದ್ದೇವೆ. ನೀವು ಇಷ್ಟು ವರ್ಷ ಪ್ರತಿಪಾದಿಸಿದ ದುರ್ಬಲ ಜಾತ್ಯತೀತ ಪರಿಕಲ್ಪನೆ ಅರ್ಥ ಕಳೆದುಕೊಳ್ಳಲಿದೆ ಎಂದ ಅವರು, ಕೇಂದ್ರ ಸರಕಾರದ ಪೌರತ್ವ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕು ತಪ್ಪಿಸಲಾಗಿದೆ. ಆದರೆ ಇದು ಭಾರತೀಯರಿಗೆ ಪೂರಕವಾಗಿದೆ ಎಂದು ಹೇಳಿದರು.

ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಿಂದ ನುಸುಳುಕೋರರಾಗಿ ಬಂದಿರುವ ಮುಸ್ಲಿಮರಿಗೆ ಭಾರತದ ಪೌರತ್ವ ನೀಡುವ ಪ್ರಶ್ನೆ ಇಲ್ಲ. ಯಾರ ಪರವಾಗಿ ಪ್ರತಿಭಟನೆಗಳು ನಡೆಯುತ್ತವೆ. ಈ ಮಸೂದೆಯಂತೆ ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಹೀಗಿದ್ದರೂ ಅವರು ರಸ್ತೆಗೆ ಇಳಿದು ಪ್ರತಿಭಟನೆ ಯಾಕಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ ಸಿ ಪ್ರಕ್ರಿಯೆ ಸಂಬಂಧ ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದೇ ಮಾತುಗಳನ್ನು ಮಾಡುತ್ತಾರೆ. ಈ ಇಬ್ಬರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.

ನಾವು ಪ್ರಚೋದನಕಾರಿ ಭಾಷಣ ಮಾಡಿದರೆ 'ಅವರು' ಉಳಿಯುವುದಿಲ್ಲ

ಭಾಷಣದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪದೇ ಪದೇ ಪಾಕಿಸ್ತಾನವನ್ನು 'ರಾಜ್ಯ' ಎಂದೇ ಉಲ್ಲೇಖಿಸುತ್ತಿದ್ದರು. ಬಳಿಕ ಸಭೆಯಲ್ಲಿದ್ದವರು ಅದೊಂದು ರಾಷ್ಟ್ರ ಎಂದು ನೆನಪಿಸಿದ ಪ್ರಸಂಗ ನಡೆಯಿತು.

ಬಳಿಕ ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಮಾಜಿ ಸಚಿವ ಯು.ಟಿ.ಖಾದರ್ ಅವರಂತೆ ನಾವು ಸಹ ಪ್ರಚೋದನಕಾರಿ ಭಾಷಣ ಮಾಡಿ, ಜನರನ್ನು ಸೇರಿಸಿದರೆ 'ಅವರು' ಉಳಿಯುವುದೇ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News