ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ನಂಜುಂಡನ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Update: 2019-12-22 13:01 GMT

ಬೆಂಗಳೂರು, ಡಿ.22: ಬೆಂಗಳೂರು ವಿಶ್ವವಿದ್ಯಾಲಯದ ಸಾಂಖ್ಯಿಕ ವಿಭಾಗದ ಪ್ರಾಧ್ಯಾಪಕ, ಖ್ಯಾತ ಭಾಷಾಂತರಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ.ಜಿ.ನಂಜುಂಡನ್ (58) ನಿಗೂಢ ಸಾವನ್ನಪ್ಪಿರುವ ಪ್ರಕರಣ ಇಲ್ಲಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ನಾಗದೇವನಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಡಾ.ಜಿ.ನಂಜುಂಡನ್ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನ್ನಡದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಕೃತಿಗಳನ್ನು ತಮಿಳಿಗೆ ಭಾಷಾಂತರಿಸುತ್ತಿದ್ದ ನಂಜುಂಡನ್ ಅವರು ಕಳೆದ 4 ದಿನಗಳಿಂದ ವಿವಿಗೆ ಬಾರದ ಕಾರಣ ವಿಭಾಗದ ಸಹಾಯಕರೊಬ್ಬರು ನಂಜುಂಡನ್ ಮನೆಗೆ ತೆರಳಿದ್ದಾರೆ. ಈ ವೇಳೆಯೂ ಮನೆ ಬಾಗಿಲು ತೆಗೆದಿರಲಿಲ್ಲ ಎನ್ನಲಾಗಿದೆ.

ನಂತರ ತಮಿಳುನಾಡಿನ ಅವರ ಪತ್ನಿಗೆ ಮಾಹಿತಿ ರವಾನಿಸಿದ್ದು, ಆಕೆ ನಿವಾಸಕ್ಕೆ ಬಂದು ಕರೆದಾಗಲೂ ಬಾಗಿಲು ತೆರೆಯದಿದ್ದಾಗ ಆತಂಕಗೊಂಡು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ತೆರೆದಾಗ ಕೊಳೆತ ಸ್ಥಿತಿಯಲ್ಲಿ ನಂಜುಂಡನ್ ಶವ ಪತ್ತೆಯಾಗಿದೆ.

ನಂಜುಂಡನ್ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕೆಂಗೇರಿ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News