ಸಿಎಎ ಬಗ್ಗೆ ಮಮತಾ ಬ್ಯಾನರ್ಜಿಯದ್ದು ದೇಶದ್ರೋಹದ ಹೇಳಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-12-22 12:58 GMT

ಬೆಂಗಳೂರು, ಡಿ.22: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ಎರಡು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕಾಂಗ್ರೆಸ್ ಸರಕಾರ ಉಗಾಂಡ ನಿರಾಶ್ರಿತರು, ತಮಿಳು ನಿರಾಶ್ರಿತರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆಗಿನ ಸನ್ನಿವೇಶ ಹಾಗಿತ್ತು ಎಂದರು.

ಇದೀಗ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದಿರುವವರಿಗೆ ಪೌರತ್ವ ನೀಡಲು ಈ ಕಾಯ್ದೆ ಜಾರಿಗೆ ತರಲಾಗಿದೆ. ಇದು ಏಳು ದಶಕಗಳ ಬೇಡಿಕೆಯೂ ಆಗಿತ್ತು. ಈಗ ಸಮಯ ಕೂಡಿ ಬಂದು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಆರಂಭದಿಂದಲೂ ಹಿಂಸೆ ಅನುಭವಿಸಿದ್ದು, ಈಗ ಅಲ್ಲಿ ಈ ಸಮುದಾಯಗಳು ಅಳಿವಿನಂಚಿನಲ್ಲಿವೆ. ಪಾಕಿಸ್ತಾನದಲ್ಲಿ 1947ರಲ್ಲಿ ಶೇ.19ರಷ್ಟಿದ್ದ ಅಲ್ಪಸಂಖ್ಯಾತರ ಸಂಖ್ಯೆ ಈಗ ಶೇ.2.6ರಷ್ಟಿದೆ. 1951ರಲ್ಲಿ ಬಾಂಗ್ಲಾದೇಶದಲ್ಲಿ ಶೇ.22ರಷ್ಟಿದ್ದ ಅಲ್ಪಸಂಖ್ಯಾತರ ಸಂಖ್ಯೆ ಈಗ ಶೇ.8.5ಕ್ಕೆ ಇಳಿದಿದೆ ಎಂದು ಅವರು ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ದೇವಾಲಯಗಳು, ಗುರುದ್ವಾರಗಳು, ಬೌದ್ಧ ಮಂದಿರಗಳನ್ನು ಸ್ಫೋಟಿಸಿ ನಾಶಪಡಿಸಲಾಗಿದೆ. ವಿಭಜನೆ ನಂತರ ಪಾಕಿಸ್ತಾನದ ಮೊದಲ ಕಾನೂನು ಸಚಿವರಾಗಿದ್ದ ಜೋಗೇಂದ್ರನಾಥ್ ಮಂಡಲ್ ಸ್ವತಃ ಕಿರುಕುಳ ಅನುಭವಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಈ ರೀತಿ ಮೂರು ನೆರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳ ಅನುಭವಿಸಿದ್ದಾರೆ. ಇವರ ಸಂಕಷ್ಟ ಬಗೆಹರಿಸಲು ಮಾನವೀಯ ನೆಲೆಯ ಮೇಲೆ ಪೌರತ್ವ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್, ಟಿಎಂಸಿ, ಬುದ್ಧಿಜೀವಿಗಳೆನಿಸಿರುವ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ದುರಂತ ಎಂದು ಅವರು ತಿಳಿಸಿದರು.

ಕಾಯ್ದೆಯಲ್ಲಿ ಯಾವುದಾದರೂ ನಕಾರಾತ್ಮಕ ಅಂಶ ಇದ್ದರೆ ತೋರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಪ್ರಹ್ಲಾದ್ ಜೋಶಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಯ್ದೆ ಬಗ್ಗೆ ನಿಖರ ಮತ್ತು ತಾರ್ಕಿಕ ವಿಷಯಗಳನ್ನೆತ್ತಿ ಈ ನಾಯಕರು ಪ್ರಸ್ತಾಪಿಸಿಯೇ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಬೆಳವಣಿಗೆ ಮತ್ತು ಮೋದಿಯ ಜನಪ್ರಿಯತೆ ಸಹಿಸಲಾಗದೆ, ಕಾಂಗ್ರೆಸ್ ನಾಯಕರು ಮುಸ್ಲಿಮ್ ಸಮುದಾಯವನ್ನು ಪ್ರಚೋದಿಸಿ ಗಲಭೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮುಸ್ಲಿಮ್ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಬಲೆಗೆ ಬೀಳಿಸಿಕೊಳ್ಳುತ್ತಲೇ ಇದೆ. ಇದನ್ನು ಮುಸ್ಲಿಮ್ ಸಮುದಾಯ ಅರ್ಥ ಮಾಡಿಕೊಳ್ಳುವ ವಿಶ್ವಾಸವಿದೆ. ಮಮತಾ ಬ್ಯಾನರ್ಜಿ ಈ ವಿಷಯವಾಗಿ ವಿಶ್ವಸಂಸ್ಥೆ ಮೊರೆಹೋಗಲು ಹೇಳಿಕೆ ನೀಡಿರುವುದು ದೇಶದ್ರೋಹದ ಕೆಲಸವಾಗಿದೆ ಎಂದು ಅವರು ಕಿಡಿಗಾರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಶಿವನಗೌಡ ನಾಯಕ್, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್, ಮಾಧ್ಯಮ ಸಂಚಾಲಕ ಎ.ಎಚ್.ಆನಂದ್, ಮಾಜಿ ವಿಧಾನಪರಿಷತ್ ಸದಸ್ಯ ಅಮರ್‌ನಾಥ್ ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News